ಮೂಡುಬಿದಿರೆ: ಶ್ರಾವಣ ಮಾಸದ ನೂಲ ಹುಣ್ಣಿಮೆ ಪ್ರಯುಕ್ತ, 2025ರ ಆಗಸ್ಟ್ 9ರ ಶನಿವಾರದಂದು ಮೂಡುಬಿದಿರೆಯ ಜೈನ ಕಾಶಿಯ 18 ಬಸದಿಗಳಲ್ಲಿ ವೈಭವೋಪೇತವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಈ ಸಂದರ್ಭದಲ್ಲಿ ಶ್ರಾವಕರವರು ಹವನದ ಮೂಲಕ ರತ್ನತ್ರಯ ಸೂತ್ರವನ್ನು ಧರಿಸಿದರು.
ಈ ಧಾರಣೆಯ ಸಂದರ್ಭದಲ್ಲಿ ಆಚಾರ್ಯ ಗುಲಾಬ್ ಭೂಷಣ ಮುನಿರಾಜ್ ಉಪಸ್ಥಿತರಿದ್ದರು. ಈ ದಿನವು ಧರ್ಮನಿರತರಿಗೆ ರಕ್ಷಣೆ ನೀಡುವ, ಧಾರ್ಮಿಕ ಭಾವನೆಗಳ ಪ್ರತೀಕವಾಗಿದೆ ಎಂದು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಗಳು ತಮ್ಮ ಅನುಗ್ರಹಾಶೀರ್ವಾದದೊಂದಿಗೆ ತಿಳಿಸಿದರು.
ಪೂಜೆ ನಂತರ ಶ್ರೀಮಠದ ಆವರಣದಲ್ಲಿ ಜನಿವಾರ ಧಾರಣಾ ವಿಧಿ ನೆರವೇರಿತು. ಅಪರಾಹ್ನದ ವೇಳೆಗೆ ಶ್ರೀಮಠದ ಶಾಂತಿ ಭವನದಲ್ಲಿ ಶಾಂತಿ ಚಕ್ರ ಆರಾಧನೆಯ 16ನೇ ಆರಾಧನೆ ಸಮಾಪ್ತಿಯಾಯಿತು. ಈ ಸಂದರ್ಭದಲ್ಲಿ ಭಟ್ಟಾರಕರ ಪಾದಪೂಜೆ ಹಾಗೂ ಆರತಿಯನ್ನು ನೆರವೇರಿಸಲಾಯಿತು.
ಭಕ್ತವೃಂದ ಧರ್ಮಲಾಭವನ್ನು ಪಡೆದುಕೊಂಡರು. ಈ ಪುಣ್ಯಸಂದರ್ಭದಲ್ಲಿ ಅಭಯ ಚಂದ್ರ ಜೈನ್, ತಿಲಕ್ ಪ್ರಸಾದ್, ದರ್ಶನ್ ಶೆಟ್ಟಿ, ಸಂಜಯಂತ ಕುಮಾರ್, ಸುದೇಶ್ ಬೆಟ್ ಕೇರಿ, ಶ್ವೇತಾ ಜೈನ್, ಸೂರಜ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸೇರಿದಂತೆ ಇಂದೂರಿನಿಂದ ನೂರಾರು ಭಕ್ತರು ಶ್ರೀಗಳಿಂದ ಜನಿವಾರ ಮತ್ತು ರಕ್ಷಾಸೂತ್ರವನ್ನು ಪಡೆದರು.