ವರದಿ ರಾಯಿ ರಾಜ ಕುಮಾರ

ಆರ್ತರಿಗೆ ಸಹಾಯ ನೀಡುವ ಪರಂಪರೆ 109 ವರ್ಷಗಳಿಂದ ಬೆಳೆದು ಬಂದುದು, ನೌಕರರ, ನಿರ್ದೇಶಕರ ನಿಯತ್ತನ್ನು ಸೂಚಿಸುತ್ತದೆ. ಪ್ರಾಮಾಣಿಕ ಲೆಕ್ಕಾಚಾರವೇ ಸಂಸ್ಥೆಯ ಜೀವಾಳ, ಆಪದ್ಧನ. ಸಕಾರಾತ್ಮಕ ಆಲೋಚನೆಗಳಿಂದ ಅನ್ನ, ನೀರು, ಆತ್ಮ, ಪ್ರಕೃತಿ ಎಲ್ಲದರಲ್ಲೂ ದೈವಿ ಭಾವನೆಯನ್ನು ಕಾಣುವ, ಉಪಕಾರ ಮಾಡಿದಾತನಲ್ಲೂ ಸಾಕ್ಷಾತ್ ದೇವರನ್ನು ಪರಿಗಣಿಸುವ, ಎಲ್ಲರನ್ನೂ ಸ್ವಾಗತಿಸುವ ಭಾರತೀಯ ಪರಂಪರೆ ಇನ್ನಷ್ಟು ಬೆಳೆಯಲಿ ಎಂದು ಬಾರ್ಕೂರು ದಾಮೋದರ್ ಶರ್ಮ ಹಾರೈಸಿದರು. 

ಅವರು ನವೆಂಬರ್ 17ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ನಾಲ್ಕನೇ ದಿನದ ಮಾನವೀಯ ಮೌಲ್ಯಗಳು ಮತ್ತು ಸಹಕಾರ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು. 

ಜ್ಞಾನ, ಧನ ಒಟ್ಟು ಸೇರಿಸುವ, ಕೃಷಿಕರಿಗೆ ಸಾಕಷ್ಟು ಲಾಭ, ಆರೋಪಕಾರವನ್ನು ಮಾಡುತ್ತಿರುವ ಸಜ್ಜನ ಸಂಸ್ಥೆ ಸೋಲಾರ್ ಗೆ ಪ್ರಾಧಾನ್ಯ ನೀಡುತ್ತಿರುವುದು ಶ್ರೇಯಸ್ಕರ ಎಂದು ಕಟೀಲು ಕ್ಷೇತ್ರದ ಹರಿನಾರಾಯಣ ಅಸ್ರಣ್ಣರು ಸಭಾಧ್ಯಕ್ಷ ಪೀಠದಿಂದ ನುಡಿದರು.

ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುತ್ತಿರುವ ಸಂಸ್ಥೆಗೆ ನಿವೃತ್ತ ಪ್ರಾಂಶುಪಾಲ ಡಾ. ಸುದರ್ಶನ್ ಕುಮಾರ್, ಮಾರೂರು ಖಂಡಿಗ ರಾಮದಾಸ ಅಸ್ರಣ್ಣ,ಮುಂಡ್ಕೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ  ವಾದಿರಾಜ ಶೆಟ್ಟಿ ಶುಭ ಹಾರೈಸಿದರು. ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಸಾಮಾಜಿಕ ಕಳಕಳಿಯ ಸಂಸ್ಥೆ, ದೇಶದಲ್ಲಿಯೇ ಮೊತ್ತ ಮೊದಲು ಮೂರು ಬಾರಿ ಬೋನಸ್ ಶೇರ್ ಕೊಟ್ಟ ಅತ್ಯಪೂರ್ವ ಸಹಕಾರಿ ಸಂಸ್ಥೆ ಎಂದರು.

ಇದೇ ಸಂದರ್ಭದಲ್ಲಿ ರಾಂಕ್ ವಿಜೇತ ಡಾ. ಉದಾತ್ ಹಾಗೂ ಕಲಾಪೋಷಕ ಪಿಲಿನಲಿಕೆ ಸಂಸ್ಥೆಗಳನ್ನು ಪುರಸ್ಕರಿಸಲಾಯಿತು. ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ್ ಎಂ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಚೇತನ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ರೇಷ್ಮಾ ಭಟ್ ವಂದಿಸಿದರು.