ಮಂಗಳೂರು, ಅ. 17 : ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಕ್ಲಿಷ್ಟ ಪರಿಸ್ಥಿತಿಯ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಅಗತ್ಯವಿದೆ ಎಂದು ಜಿಲ್ಲಾ ಲಯನ್ಸ್ ಗವರ್ನರ್ ಲ. ವಸಂತ್ ಕುಮಾರ್ ಶೆಟ್ಟಿ ಅಬಿಪ್ರಾಯ ಪಟ್ಟರು.

ಲಯನ್ಸ್ ಕ್ಲಬ್ಸ್ ಜಿಲ್ಲೆ 317 D ಮತ್ತು ಶಾರದಾ ಯೋಗ ಮತ್ತು ಪ್ರಕೃತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ದಿನಾಂಕ 17-10-2021, ಬಾನುವಾರದಂದು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಯೋಗ ಶಿಬಿರ ಮತ್ತು ಪ್ರಕೃತಿ ಚಿಕಿತ್ಸಾ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರ ಯೋಗ ಮಾಡುವುದರಿಂದ ಮತ್ತು ನಮ್ಮ ಆಹಾರ ಪದ್ಧತಿಯ ಬದಲಾವಣೆ ಹಾಗೂ ಪ್ರಕೃತಿ ಚಿಕಿತ್ಸಾ ವಿಧಾನದಿಂದ ನಮ್ಮ ದೇಹಕ್ಕೆ ಉತ್ತಮ ಆರೈಕೆ ಸಿಗುವುದರಿಂದ ನಾವು ಅತಿಯಾಗಿ ಬಳಸುವ ಮದ್ದುಗಳಿಂದ ದೂರವಿರ ಬಹುದು ಎಂದು ಅವರು ಹೇಳಿದರು.

ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೋ. ಎಂ.ಬಿ.ಪುರಾಣಿಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ದಿವ್ಯಾ ಶೆಟ್ಟಿ, ಡಾ. ಮೆಲ್ವಿನ್ ಡಿ.ಸೋಜ,  ಮಮತಾ ಶೆಟ್ಟಿ, ಮೋಹಿನಿ ಶೆಟ್ಟಿ, ಶಿವರಾಂ ರೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ  ಡಾ. ಗೀತಾ ಪ್ರಕಾಶ್, ಡಾ. ರಾಜೇಶ್ ಪಾದೆಕಲ್ಲು, ಡಾ. ವಿಜಯಲಕ್ಷ್ಮಿ ರಾಜೇಶ್ ಇವರು ಆಹಾರ ಸೇವನೆ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಲಯನ್ಸ್ ಮುಖ್ಯ ಸಂಯೋಜಕಿ ಆಶಾ  ಸಿ ಶೆಟ್ಟಿಯವರು ಸ್ವಾಗತಿಸಿದರು.  ಎ. ಚಂದ್ರಹಾಸ್ ಶೆಟ್ಟಿ ಹಾಗು ಕುಮಾರಿ ಶಕ್ತಿ ನಿರೂಪಿಸಿದರು. ಡಾ. ವಿದ್ಯಾ ಶೆಟ್ಟಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಇದೇ ವೇಳೆ ತಜ್ಜ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗು ಆಹಾರ ಕ್ರಮದ ಬಗ್ಗೆ ತಿಳುವಳಿಕೆ ಮಾಹಿತಿ ನೀಡಲಾಯಿತು.