ಪುತ್ತೂರು: “ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ. ಮತದಾನ ನಮ್ಮೆಲ್ಲರ ಹಕ್ಕು ಮಾತ್ರವಲ್ಲದೆ ಕರ್ತವ್ಯ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಮತದಾನದಲ್ಲಿ ಪಾಲ್ಗೊಂಡಾಗ ಮಾತ್ರವೇ ಯೋಗ್ಯ ಸರಕಾರವನ್ನು ಪಡೆಯಲು ಸಾಧ್ಯ” ಎಂದು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಕೆ ಚಂದ್ರಶೇಖರ್ ಅಭಿಪ್ರಾಯಪಟ್ಟರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನ ಘಟಕದ ವತಿಯಿಂದ ಆಯೋಜಿಸಲಾದ “ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ “ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ಇತಿಹಾಸ ಹಾಗೂ ಪ್ರಾಮುಖ್ಯತೆ ಇದೆ. ಭಾರತವು ಸ್ವತಂತ್ರವಾಗುವುದಕ್ಕೂ ಹಿಂದೆ ಮತದಾನದ ಸ್ವಾತಂತ್ರ್ಯ ಎಲ್ಲಾ ಪ್ರಜೆಗಳಿಗೂ ಇರಲಿಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲರೂ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ=ಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಎಂ ರವರು ವಿವೇಚನೆಯಿಂದ ಮತ ಚಲಾಯಿಸಬೇಕು ಹಾಗೂ ಮತದಾನದಲ್ಲಿ ಅಲಕ್ಷ್ಯ ಸಲ್ಲದು ಎಂದು ಅಭಿಪ್ರಾಯಪಟ್ಟರು.
ಕಿರಣ್ ಹಾಗೂ ಕೀರ್ತಿ ಪ್ರಾರ್ಥಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿಯಾದ ವಾಸುದೇವ ಎನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮನೋಜ್ ವಂದಿಸಿದರು. ಅನಘ ರೈ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿಯಾದ ಪುಷ್ಪಾ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.