ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಬಗ್ಯೆ ಕಳೆದ ಕೆಲವು ದಿನಗಳಿಂದ ಸಮೂಹ ಮಾಧ್ಯಮಗಳಲ್ಲಿ ಎಸ್.ಐ.ಟಿ. ತನಿಖೆಯ ನೆಪದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಯೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ಅವರು ಭಾನುವಾರ ಧರ್ಮಸ್ಥಳಕ್ಕೆ ಭೆಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಧರ್ಮಸ್ಥಳ, ಅಣ್ಣಪ್ಪಸ್ವಾಮಿ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಬಗ್ಯೆ ಸಮೂಹ ಮಾಧ್ಯಮಗಳಲ್ಲಿ ಆಧಾರ ರಹಿತ ಸುಳ್ಳು ವದಂತಿಗಳ ಅಪಪ್ರಚಾರದಿಂದ ಅಸಂಖ್ಯಾತ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಗೊಂದಲದ ವಾತಾವರಣ ಮೂಡಿದೆ.
ಎಸ್.ಐ.ಟಿ. ತನಿಖೆಯನ್ನು ಬಿ.ಜೆ.ಪಿ. ಸ್ವಾಗತಿಸುತ್ತದೆ. ಆದರೆ, ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಯೆ ಯಾವುದೇ ಮಾಹಿತಿ ಅವರು ಬಹಿರಂಗಪಡಿಸಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಬಗ್ಯೆಯೂ ತನಿಖೆಯಾಗಬೇಕು ಎಂದು ಅವರು ಹೇಳಿದರು.
ದೂರುದಾರನ ಹಿನ್ನೆಲೆ ಬಗ್ಯೆ ಹಾಗೂ ಧರ್ಮಸ್ಥಳದ ಬಗ್ಯೆ ಅಪಪ್ರಚಾರ ಮಾಡುವವರ ಬಗ್ಯೆಯೂ ತನಿಖೆಯಾಗಲಿ ಎಂದು ಅವರು ಆಶಿಸಿದರು.
ಶವಗಳನ್ನು ಹೂತು ಹಾಕಿದ ಪ್ರಕರಣ ಕಪೋಲಕಲ್ಪಿತ ವಿಚಾರವಾಗಿದ್ದು, ಹದಿನೇಳು ಕಡೆಗಳಲ್ಲಿ ಹೊಂಡ ತೋಡಿದರೂ ಸಾಕ್ಷಿ, ಪುರಾವೆ ಏನೂ ಸಿಗಲಿಲ್ಲ. ಇದರಿಂದಾಗಿ, ಪ್ರಕರಣದ ವ್ಯವಸ್ಥಿತ ಷಡ್ಯಂತ್ರದ ಹಿಂದೆ ಅಪಪ್ರಚಾರ ಹಾಗೂ ಶ್ರದ್ಧಾ ಭಂಗದ ಹುನ್ನಾರವೂ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಪೂಂಜ, ಛಲವಾದಿ ನಾರಾಯಣಸ್ವಾಮಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಿ.ಟಿ. ರವಿ, ಭಾಗೀರಥಿ ಮುರುಳ್ಯ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೋಳಿ, ಎಸ್.ಆರ್. ವಿಶ್ವನಾಥ್, ಧನಂಜಯ ಸರ್ಜಿ, ಕಿಶೋರ್ ಕುಮಾರ್ ಬೊಟ್ಯಾಡಿ, ಕೊರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಉಮಾನಾಥ ಕೋಟ್ಯಾನ್, ರವಿಕುಮಾರ್, ಮೈಸೂರು, ಶ್ರೀವಾತ್ಸವ ಹಾಗೂ ಅಪಾರ ಸಂಖ್ಯೆಯಲ್ಲಿ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಳಿಕ ಬಿ.ವೈ ವಿಜಯೇಂದ್ರ ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.