ಉಡುಪಿ: ಕೈಗಾರಿಕೆಗಳ ಸ್ಥಾಪನೆಗೆ ನಿವೇಶನ ಮಂಜೂರಾಗಿರುವ ಕೈಗಾರಿಕೋದ್ಯಮಿಗಳು ಘಟಕಗಳನ್ನು ಕೂಡಲೇ ಸ್ಥಾಪಿಸಬೇಕು. ಹೆಚ್ಚುವರಿ ಕಾಲಾವಕಾಶ ಕಲ್ಪಿಸುವುದಿಲ್ಲ. ನಿವೇಶನವನ್ನು ಮರುಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ ವಿಶ್ವಕರ್ಮ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ನಿವೇಶನವನ್ನು ನೀಡಿದ್ದರೂ ಸಹ ಕೈಗಾರಿಕಾ ಯೋಜನೆಗಳ ಅನುಷ್ಠಾನವನ್ನು ಕಾಲಮಿತಿಯೊಳಗೆ ಪ್ರಾರಂಭಿಸಿರುವುದಿಲ್ಲ. ಘಟಕಗಳ ಸ್ಥಾಪನೆಗೆ ಸಮರ್ಪಕ ಕಾರಣಗಳು ಕಂಡುಬರದೇ ಇದ್ದಲ್ಲಿ ಅಂತಹ ನಿವೇಶನಗಳನ್ನು ಕೈಗಾರಿಕೆ ಪ್ರಾರಂಭಿಸಲು ನಿವೇಶನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಇತರರಿಗೆ ಮರು ಹಂಚಿಕೆ ಮಾಡಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಹೆಬ್ರಿ ತಾಲೂಕು ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ನಿಟ್ಟೆಯಲ್ಲಿ 50.42 ಎಕ್ರೆ ಸೇರಿದಂತೆ ಒಟ್ಟು 165.98 ಎಕ್ರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಕೆ.ಐ.ಎ.ಡಿ.ಬಿ ಅಭಿಯಂತರರುಗಳಿಗೆ ಸೂಚಿಸಿದ ಅವರು, ಹೊಸ ಕೈಗಾರಿಕೆ ಪ್ರದೇಶಗಳ ವಿಸ್ತರಣೆಗೆ ಎಲ್ಲೂರು ಹಾಗೂ ಸಾಂತೂರು 941.98 ಎಕ್ರೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.
ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆ ಆದ್ಯತೆಯ ಮೇಲೆ ಕೈಗೊಂಡು ರಸ್ತೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಬೇಕು ಎಂದ ಅವರು, ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆಯ ಕೈಗಾರಿಕಾ ಪ್ರದೇಶದಲ್ಲಿನ ನಿವೇಶನಗಳ ನಮೂನೆ 9/11 ದಾಖಲೆಗಳನ್ನು ಈಗಾಗಲೇ 16 ಘಟಕಗಳಿಗೆ ನೀಡಿದ್ದು, ಬಾಕಿ ಉಳಿದ 8 ಘಟಕಗಳಿಗೆ ಕೂಡಲೇ ಮಾಡಿಕೊಡುವ ಕಾರ್ಯಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾಡಿಕೊಡುವಂತೆ ಸೂಚಿಸಿದರು.
ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಅಳವಡಿಸಿರುವ 100 ಕೆ.ವಿ ವಿದ್ಯುತ್ ಪರಿವರ್ತಕವನ್ನು 250 ಕೆ.ವಿ ಗೆ ಹೆಚ್ಚಿಸುವ ಟ್ರಾನ್ಸ್‍ಫಾರ್ಮ್ ಅಳವಡಿಸುವ ಕಾರ್ಯವನ್ನು ಮುಂದಿನ ಒಂದುವಾರದ ಒಳಗೆ ಕೈಗೊಳ್ಳಬೇಕೆಂದು ಮೆಸ್ಕಾಂ ಇಲಾಖೆಯ ಅಭಿಯಂತರರುಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ರಫ್ತು ಉದ್ಯಮವನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ರಫ್ತನ್ನು ಹೆಚ್ಚಿಸಲು ಕ್ರಮವಹಿಸಬೇಕು ಎಂದ ಅವರು, ಮರೈನ್ ಪ್ರೋಡಕ್ಟ್‍ಗಳ ರಫ್ತಿಗೆ ಅವಶ್ಯಕತೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಸೆಂಟ್ರಲೈಸ್ಡ್ ಸೀ ಫುಡ್ ಪಾರ್ಕ್‍ಗಳ ನಿರ್ಮಾಣ ಹಾಗೂ ಎಕ್ಸ್‍ಪೋರ್ಟ್ ಇನ್ಸ್‍ಪೆಕ್ಷನ್ ಏಜೆನ್ಸಿ ಗಳನ್ನು ಹೆಚ್ಚುವರಿಯಾಗಿ ನೇಮಿಸಲು ಕ್ರಮವಹಿಸಬೇಕು ಎಂದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಪಿ.ಎಂ ವಿಶ್ವಕರ್ಮ ಯೋಜನೆಯ 6274 ಫಲಾನುಭವಿಗಳಿಗೆ ಈಗಾಗಲೇ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ. 3916 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಸೌಲಭ್ಯ ಮಂಜೂರಾಗಿದ್ದು, 3573 ಫಲಾನುಭವಿಗಳ ಖಾತೆಗೆ ಆರ್ಥಿಕ ಸಹಾಯಧನವನ್ನು ಪಾವತಿಸಲಾಗಿದೆ ಎಂದ ಅವರು ಈ ಯೋಜನೆಯಡಿ ಆಯ್ಕೆಯಾದವರಿಗೆ ಕೌಶಲ್ಯ ತರಬೇತಿಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ನೀಡುವುದರ ಜೊತೆಗೆ ಬ್ಯಾಂಕ್‍ಗಳು ಆರ್ಥಿಕ ಸೌಲಭ್ಯವನ್ನು ಒದಗಿಸಬೇಕು ಎಂದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಂಹಾತೇಶ ಹಂಗರಗಿ, ಖಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹವಾಮಾನ ಇಲಾಖೆ ಮುನ್ಸೂಚನೆಯುಂತೆ ಕರಾವಳಿ ಭಾಗದಲ್ಲಿ ಭಾರೀ ಗಾಳಿ ಸಾಧ್ಯತೆ
ಉಡುಪಿ, ಸೆಪ್ಟಂಬರ್ 29 (ಕವಾ):ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಅಕ್ಟೋಬರ್ 2 ರವರೆಗೆ ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಬೀಸುವ ಸಾಧ್ಯತೆ ಇದ್ದು, ಸಮುದ್ರದ ಅಲೆಗಳ ಎತ್ತರವು ಹೆಚ್ಚಾಗಿರುತ್ತದೆ. ಈ ಹಿನ್ನೆಲೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.
ತುರ್ತು ಸೇವೆಗೆ ಶುಲ್ಕ ರಹಿತ 1077, ದೂ.ಸಂಖ್ಯೆ: 0820-2574802, ತಹಶೀಲ್ದಾರರ ಕಚೇರಿಯ ಸಹಾಯವಾಣಿ ಸಂಖ್ಯೆಗಳಾದ ಉಡುಪಿ :0820-2520417, ಕುಂದಾಪುರ : 08254-230357, ಕಾಪು : 0820-2551444, ಬ್ರಹ್ಮಾವರ : 0820-2560494 ಹಾಗೂ ಬೈಂದೂರು : 08254-251657 ಮತ್ತು ಉಡುಪಿ ನಗರಸಭೆಯ ಸಹಾಯವಾಣಿ ಸಂಖ್ಯೆ: 0820-2593366 ಅಥವಾ 0820-2520306 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.