ಗುಜರಾತ್: ಗುಜರಾತ್ ರಾಜ್ಯದ ಬರೋಡ ಇಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ತುಳು ಸಂಘ ಬರೋಡ ಸಂಸ್ಥೆಯು ಗುರುವಾರ ತುಳುನಾಡ ವೈಶಿಷ್ಟ್ಯಮಯ ಸಾಂಪ್ರದಾಯಿಕ ಕುರಲ್ ಪರ್ಬ (ಪುದ್ದಾರ್) ತೆನೆ ಹಬ್ಬವನ್ನು ಧಾರ್ಮಿಕ ಪೂಜಾಧಿಗಳೊಂದಿಗೆ ನೆರವೇರಿಸಿತು.

ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಅವರ ಮಾರ್ಗದರ್ಶನ ಮತ್ತು ಗೌರವಾಧ್ಯಕ್ಷ ದಯಾನಂದ ಬೋಂಟ್ರ ಬೆಳ್ಮಣ್ ಸಾರಥ್ಯದಲ್ಲಿ ತುಳುನಾಡ ಧಾರ್ಮಿಕ ಆಚರಣೆಯಂತೆ ಕುರಲ್ ಪರ್ಬ (ಕೊರಲ್ ಪಾಡುನ ಪರ್ಬ) ನಡೆಸಲ್ಪಟ್ಟಿತು. ಸಾಂಪ್ರದಾಯಿಕ  ಉಡುಪುಗಳನ್ನು ಧರಿಸಿ ಉತ್ಸುಕರೆಣಿಸಿ ಸಿದ್ಧರಾದ ಸದಸ್ಯರು ಮತ್ತು ಮಕ್ಕಳು ತೆನೆಯನ್ನು  ಚಾವಡಿಯೊಳಗೆ ಬರಮಾಡಿ ಕೊಂಡರು.

ವರ್ಷದ ಹೊಸ ಸಾಗುವಳಿಯಿಂದ ಬೆಳೆಸಿದ ವರ್ಷದ ಹೊಸ ಭತ್ತದ ತೆನೆಯನ್ನು  ಕೃಷಿ ಪ್ರಧಾನವಾಗಿ ಬೆಳೆದ ಪೈರು, ದವಸಧಾನ್ಯ, ಫಲಪುಷ್ಫ, ಕಾಯಿಪಲ್ಯ, ಬೆಳೆಗಳನ್ನು ಮಹಾವೀರ್ ಬಿ.ಜೈನ್ ಶ್ರದ್ಧಾಪೂರ್ವಕವಾಗಿ ಚಾವಡಿಯೊಳಗೆ  ಹೊತ್ತುತಂದಿದ್ದು ಸದಸ್ಯರೆಲ್ಲರೂ ಸೇರಿ ತುಳುನಾಡ ಆಚರಣೆ ಪದ್ಧತಿಯಂತೆ ಪೂಜಿಸಿ ಸಾಂಪ್ರದಾಯಿಕವಾಗಿ ತೆನೆಹಬ್ಬ ಆಚರಿಸಿದರು. ಫಲಪುಷ್ಫಗಳಿಂದ ಸಿಂಗಾರಿಸಿದ ದೇವರ ಮಂಟದ ಮುಂದೆ ಕದಿರು (ತೆನೆ), ಕಾಯಿಪಲ್ಯ, ಫಲಗಳಿಗೆ ದಯಾನಂದ ಬೋಂಟ್ರ ಅವರು ಸೀಯಾಳ, ಕ್ಷೀರ ಅಭಿಷೇಕಗೈದು ಪ್ರಾರ್ಥನೆ ನೆರವೇರಿಸಿ ಕದಿರೆ ಕಟ್ಟಿ ಪ್ರಕೃತಿಮಾತೆಯನ್ನು ಸ್ಮರಿಸಿ, ಶುಭಾ ಶಂಸನೆಗೈದರು. ಸಂಘದ ಮಹಿಳಾ ಮುಖ್ಯಸ್ಥೆ ಡಾ| ಶರ್ಮಿಳಾ ಎಂ.ಜೈನ್ ಆರತಿಗೈದರು,

ಬಳಿಕ ಹೊಸ ಭತ್ತದ ಅಕ್ಕಿಯೊಂದಿಗೆ ಹೊಸ ಅಕ್ಕಿ ಅನ್ನ, ಪಾಯಸ, ಬಗೆಬಗೆಯ ಪಲ್ಯಗಳೊಂದಿಗೆ ರುಚಿಕರ ಶುದ್ಧ ಶಾಖಾಹಾರಿ ಭೋಜನದೊಂದಿಗೆ ತುಳುವವರ ವಿಶಿಷ್ಟ ಕುರಲ್ ಪರ್ಬ ತೆನೆಹಬ್ಬವನ್ನು ಆಚರಿಸಿದರು.

ಸಂಘದ ದೀರ್ಘಕಾಲಿಕ ಸದಸ್ಯರಾಗಿದ್ದು, ಇದೀಗ ಹುಟ್ಟೂರಿನಲ್ಲಿ ನೆಲೆಯಾಗುತ್ತಿರುವ ಚಂದ್ರಹಾಸ ಶೆಟ್ಟಿ ಮತ್ತುಕಸ್ತೂರಿ ಶೆಟ್ಟಿ ದಂಪತಿಗೆ ಸನ್ಮಾನಿಸಿ ಗೌರವಿಸಲಾಯಿತು. ರತ್ನಾ ಶೇಖರ್ ಶೆಟ್ಟಿ ತೆನೆ ಹಬ್ಬದ ವೈಶಿಷ್ಟ್ಯತೆ ಬಗ್ಗೆ ಸ್ಠೂಲವಾಗಿ ಮಾಹಿತಿಯನ್ನಿತ್ತರು.

ಮದನ್‌ಕುಮಾರ್ ಮೂಡುಗೆರೆ ಮತ್ತು ಕಾರ್ತಿಕ್ ಗೌಡ ಮೂಡುಗೆರೆ ಅವರ ಪ್ರಧಾನ ಸಂಯೋಜನೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಕೆ.ಮಾಧವ ಶೆಟ್ಟಿ, ರವಿ ಶೆಟ್ಟಿ, ಗಾನವಿ ಎಂ.ಗೌಡ, ಪ್ರಮೀಳಾ ಶೆಟ್ಟಿ, ಕವಿತಾ ಗೌಡ, ಜಯಶ್ರೀ ಪೂಜಾರಿ ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.

ಸದಸ್ಯರು ಭಜನೆ ನಡೆಸಿದ್ದು, ಮಹಿಳೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಡಾ| ಶರ್ಮಿಳಾ ಎಂ.ಜೈನ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ ಕೃತಜ್ಞತೆ  ಸಮರ್ಪಿಸಿದರು.