ಕಾರ್ಕಳ: ಚೀನಾದ ಶಾಂಗ್ಲೋದಲ್ಲಿ ಇದೇ ಡಿಸೆಂಬರ್ ತಿಂಗಳ 3 ರಿಂದ 13 ನೇ ತಾರೀಖಿನವರೆಗೆ ನಡೆದ ಅಂತಾರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‍ನವರು ನಡೆಸುವ 15ರ ವಯೋಮಿತಿಯ ವಿಶ್ವಶಾಲಾ ಮಕ್ಕಳ ಬಾಲಕಿಯರ ವಿಭಾಗದ ವಾಲಿಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಭಾರತ ರಾಷ್ಟ್ರೀಯ ತಂಡದ ನಾಯಕಿ, ಕಾರ್ಕಳ ಕ್ರೈಸ್ಟ್ ಕಿಂಗ್  ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ಅವರು ಪಂದ್ಯಾವಳಿ ಮುಗಿಸಿ ಕಾರ್ಕಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. 

ಕ್ರೈಸ್ಟ್ ಕಿಂಗ್  ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಕಳದ ನಾಗರೀಕರು ಮತ್ತು ಕ್ರೀಡಾಭಿಮಾನಿಗಳ ವತಿಯಿಂದ ಕಾರ್ಕಳ ಅನಂತಶಯನ ವೃತ್ತದಿಂದ ಕ್ರೈಸ್ಟ್ ಕಿಂಗ್  ಶಿಕ್ಷಣ ಸಂಸ್ಥೆಗೆ ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ತೆರೆದ ಜೀಪಿನಲ್ಲಿ ಚೆಂಡೆ, ಬ್ಯಾಂಡ್ ಘೋಷಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ತದನಂತರ ಕ್ರೈಸ್ಟ್ ಕಿಂಗ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಶುಭದ ರಾವ್ ಅವರು “ಸಣ್ಣ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಶಗುನ್ ಸಾಧನೆ ಎಲ್ಲರಿಗೂ ಸ್ಪೂರ್ತಿ, ನಿರಂತರ ಶ್ರಮ, ಬದ್ಧತೆ, ತಂದೆ ತಾಯಿಯರ ಪ್ರೋತ್ಸಾಹ, ತರಬೇತುದಾರರ ತರಬೇತಿಗಳಿಂದಾಗಿ ಶಗುನ್ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಭಾರತ ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಒದಗಿ ಬರಲಿ” ಎಂದು ಹೇಳಿದರು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಶಗುನ್ ಸಾಧನೆ ಅವಳ ನಿರಂತರ ಪರಿಶ್ರಮಕ್ಕೆ ದೊರೆತ ಫಲ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಒಂದೆರಡು ತಿಂಗಳ ಪರಿಶ್ರಮ ಸಾಕಾಗುವುದಿಲ್ಲ, ವರ್ಷಾನುಗಟ್ಟಲೆ ಪರಿಶ್ರಮ ಇದ್ದರೆ ಮಾತ್ರ ಇಂತಹ ಸಾಧನೆ ಸಾಧ್ಯ. ಈ ಸಾಧನೆ ನಮ್ಮ ಕಾರ್ಕಳಕ್ಕೆ ಹೆಮ್ಮೆಯ ವಿಷಯ, ನಮ್ಮ ಕ್ರೈಸ್ಟ್ ಕಿಂಗ್   ಶಿಕ್ಷಣ ಸಂಸ್ಥೆ ಕ್ರೀಡಾ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತದೆ” ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶಗುನ್ ಅವರನ್ನು ಸಂಸ್ಥೆಯ ವತಿಯಿಂದ ವಾಲಿಬಾಲ್‍ಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು. ಕ್ರೈಸ್ಟ್ ಕಿಂಗ್  ಎಜುಕೇಷನ್  ಟ್ರಸ್ಟ್ ನ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಶಗುನ್ ಅವರ ತಂದೆ ಸಂದೇಶ್ ವರ್ಮ, ತಾಯಿ ಶ್ರುತಿರಾಜ್, ತರಬೇತುದಾರರಾದ ಸಂತೋಷ್ ಡಿಸೋಜ, ಜೀವನ್ ಡಿಸಿಲ್ವಾ, ಜೈರಾಜ್ ಪೂಜಾರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್, ಸಂಸ್ಥೆಯ ಪದವಿಪೂರ್ವ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಮುಖ್ಯ ಶಿಕ್ಷಕರಾದ ಪ್ರೌಢಶಾಲಾ ವಿಭಾಗದ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ವಿಭಾಗದ ರುಡಾಲ್ಫ್ ಕಿಶೋರ್ ಲೋಬೊ ಮುಂತಾದವರು ಉಪಸ್ಥಿತರಿದ್ದರು.