ಪುತ್ತೂರು, ಮೇ 30: ಪುತ್ತೂರು ಸಂತ ಫಿಲೋಮಿನಾ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರೂ ಆದ ಡಾ| ಪೆ ಎಸ್ ಕೃಷ್ಣ ಕುಮಾರ್ 38 ವರ್ಷಗಳ ಸುದೀರ್ಘ ಸೇವೆಯ ಬಳಿಕ ಮೇ 31ರಂದು ಸೇವಾ ನಿವೃತ್ತಿ ಹೊಂದಲಿರುವರು.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪರ್ಲಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪಡೆದು, ಪದವಿ ಪೂರ್ವ ವಿದ್ಯಾಭ್ಯಾಸವನ್ನು ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಾಗೂ ಪದವಿ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ ಹೆಚ್ ಡಿ ಪದವಿಗಳನ್ನು ಗಳಿಸಿರುತ್ತಾರೆ.
1986ರಲ್ಲಿ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಪಕರಾಗಿ ನೇಮಕಗೊಂಡಿರುತ್ತಾರೆ. 2001 ರಿಂದ 2004ರವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿಗೆ ವರ್ಗಾವಣೆಗೊಂಡು ಅನಂತರ 2003 ರಿಂದ 2024ರ ವರೆಗೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುತ್ತಾರೆ. ತಮ್ಮ ಸೇವಾವಧಿಯಲ್ಲಿ ಅವರು ಕಾಲೇಜಿನ ವಿಜ್ಞಾನ ಸಂಘದ ನಿರ್ದೇಶಕರಾಗಿ, ಕಾಲೇಜಿನ ವಾರ್ಷಿಕ ಸಂಚಿಕೆ ಫಿಲೋಪ್ರಭಾದ ಸಂಪಾದಕರಾಗಿ, ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರವಹಿಸಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ಅಧ್ಯಯನಮಂಡಳಿಯ (ಬೋರ್ಡ್ ಆಫ್ ಸ್ಟಡೀಸ್) ಸದಸ್ಯರಾಗಿ ಹಲವುಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಹಾಗೂ ಒಂದು ಬಾರಿ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಇವರ ಸಂಶೋಧನಾ ಲೇಖನಗಳು ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಶೋಧನಾ ಜರ್ನಲ್ಗಳಲ್ಲಿ ಪ್ರಕಟಗೊಂಡಿರುತ್ತವೆ.
ಪುತ್ತೂರಿನ ಸೀತಾರಾಮ ಪಾಡಿ ಹಾಗೂ ವೆಂಕಟೇಶ್ವರಿ ಪಾಡಿ ದಂಪತಿಯ ಪುತ್ರರಾದ ಇವರು ಪತ್ನಿ ಜಯಶ್ರೀ ಹಾಗೂ ಬೆಂಗಳೂರಿನಲ್ಲಿ ಸಂಶೋಧನೆ ನಡೆಸುತ್ತಿರುವ ಪುತ್ರಿ ಮಧಿರಾ ಭಟ್ ಹಾಗೂ ತೃತೀಯ ವರ್ಷದ ಆರ್ಕಿಟೆಕ್ಚರ್ ವ್ಯಾಸಂಗ ಮಾಡುತ್ತರುವ ಪುತ್ರ ರಾಮ ತೇಜಸ್ವಿಯೊಡನೆ ಪುತ್ತೂರಿನ ಮರೀಲ್ನಲ್ಲಿ ಸಂತೃಪ್ತಜೀವನ ನಡೆಸುತ್ತಿದ್ದಾರೆ. ಇವರ ನಿವೃತ್ತಜೀವನವು ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲಿ ಎಂದು ಕಾಲೇಜಿನ ಸಂಚಾಲಕರು, ಪ್ರಾಂಶುಪಾಲರು, ಆಡಳಿತಮಂಡಳಿಯ ಸದಸ್ಯರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿರುತ್ತಾರೆ.