ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಿತ ವಿಭಾಗದ ವತಿಯಿಂದ ಕಾಲೇಜಿನ ಗಣಿತ ವಿದ್ಯಾರ್ಥಿಗಳಿಗೆ ‘ಲ್ಯಾಟೆಕ್ಸ್ ಎಸೆನ್ಷಿಯಲ್ಸ್; ಎ ಕಾಂಪ್ರಹೆನ್ಸಿವ್ ಅಪ್ರೋಚ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ದಿನದ ಕೌಶಲ್ಯ ವರ್ಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು "ಲ್ಯಾಟೆಕ್ಸ್ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಸಹಕಾರಿಯಾಗುವ ಉತ್ತಮ ಸಾಧನವಾಗಿದೆ. ಸಂಕೀರ್ಣ ದಾಖಲೆಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಅದು ಸಯಾಯಕವಾಗುವ ಈ ಸಲಕರಣೆಯ ಬಳಕೆಯು ವಿದ್ಯಾರ್ಥಿಗಳಿಗೆ ತಿಳಿದಿರಬೇಕು. ವೃತ್ತಿಪರ ಸಂಶೋಧನಾ ಲೇಖನಗಳನ್ನು ಕಲಾತ್ಮಕವಾಗಿ ಪ್ರಸ್ತುತಪಡಿಸಲು ಲ್ಯಾಟೆಕ್ಸ್ ಅನುವು ಮಾಡಿಕೊಡುತ್ತದೆ" ಎಂದು ಹೇಳಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ವಿಶ್ರಾಂತ ಉಪಪ್ರಾಂಶುಪಾಲರಾದ ಪ್ರೊ.ಗಣೇಶ್ ಭಟ್ರವರು ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ, “ಗಣಿತ ಮತ್ತು ಸಂಶೋಧನಾಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳು ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಲೇಖನಗಳನ್ನು ತಯಾರಿಸುವ ಸಂದರ್ಭದಲ್ಲಿ ಲ್ಯಾಟೆಕ್ಸ್ ಸಹಕಾರಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಲ್ಯಾಟೆಕ್ಸ್ ನಲ್ಲಿ ಪ್ರಾವೀಣ್ಯತೆ ಹೊಂದಿದ್ದಲ್ಲಿ ಸಮರ್ಪಕವಾಗಿ ಸಂಶೋಧನಾ ಲೇಖನಗಳನ್ನು ಸಿದ್ಧಪಡಿಸಬಹುದು. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ" ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಮೊಳೆಯಾರ್ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಫಿಲೋಮಿನಾ ಕಾಲೇಜಿನ ಪಿಜಿ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರತೀಕ್ ರೈ ಎನ್. ಅವರು ಲ್ಯಾಟೆಕ್ಸ್ ನ ಸಂಪೂರ್ಣ ಪರಿಚಯವನ್ನು ಒದಗಿಸಿದರು, ಡಾಕ್ಯುಮೆಂಟ್ ರಚನೆ, ಫಾರ್ಮ್ಯಾಟಿಂಗ್ ಮತ್ತು ವೈಶಿಷ್ಟ್ಯಗಳನ್ನು ಒತ್ತಿಹೇಳಿದರು. ಅವರ ಪರಿಣತಿ ಮತ್ತು ಬೋಧನಾ ಶೈಲಿಯು ವಿದ್ಯಾರ್ಥಿಗಳಿಗೆ ಲ್ಯಾಟೆಕ್ಸ್ ನ ಸಂಕೀರ್ಣತೆಗಳನ್ನು ಅರಿತುಕೊಳ್ಳಲು ಸಹಾಯ ಮಾಡಿತು. ಅರ್ಚನಾ ಎ ಎಲ್ ಮತ್ತು ಸುಷ್ಮಾ ಎಂ ಬಿ ಪ್ರಾರ್ಥಿಸಿದರು. ಪ್ರತೀಕ್ಷಾ ಸ್ವಾಗತಿಸಿದರು. ರಕ್ಷಿತಾ ಕೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕ್ಲಿಯಾನ್ ಫ್ರಾನ್ಸ್ಟಿನ್ ಮಿರಾಂಡಾ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು