ಮಂಗಳೂರು: ಗ್ರಾಮೀಣ ಸೊಗಡಿನ ಕಂಬಳವನ್ನು ನಗರ ವಾತಾವರಣಕ್ಕೆ ಪರಿಚಯಿಸುವ ಜೊತೆಗೆ, ಜಗತ್ತಿನ ವಿವಿಧೆಡೆ ನೆಲೆಸಿರುವ ಮಂಗಳೂರಿನ ಪ್ರತಿಭೆಗಳು ತಾಯ್ನಾಡಿಗೆ ಮರಳಿ ಇಲ್ಲಿ ಉದ್ಯಮ ಆರಂಭಿಸಿ ಕೊಡುಗೆ ನೀಡುವಂತೆ ಪ್ರೇರೇಪಿಸುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ‘ಬ್ಯಾಕ್ ಟು ಊರು’ ಪರಿಕಲ್ಪನೆ ಅತ್ಯಂತ ವಿಭಿನ್ನ ಮತ್ತು ಶ್ಲಾಘನೀಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.




ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ–ಲಕ್ಷ್ಮಣ ಜೋಡುಕರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಆಯೋಜಿಸಲಾದ ನವವರ್ಷದ ವಿಶೇಷ 9ನೇ ವರ್ಷದ ಕಂಬಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತವಾಗಿದ್ದ ಕಂಬಳವನ್ನು ನಗರಕ್ಕೆ ತಂದಿರುವುದು ಮಹತ್ವದ ಸಾಧನೆ. ಕಂಬಳ ಕೇವಲ ಸಾಂಸ್ಕೃತಿಕ ಕ್ರೀಡೆ ಮಾತ್ರವಲ್ಲ, ಅದು ರಾಜ್ಯದ ಅಸ್ತಿತ್ವದ ಪ್ರತೀಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣದಲ್ಲಿ ಕಂಬಳ ಸಮಿತಿ ಅಧ್ಯಕ್ಷರು ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ‘ಬ್ಯಾಕ್ ಟು ಊರು’ ಪರಿಕಲ್ಪನೆ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕರಾವಳಿಗರನ್ನು ತಾಯ್ನಾಡಿನ ಅಭಿವೃದ್ಧಿಗೆ ಸಾಮಾಜಿಕ ಹಾಗೂ ಆರ್ಥಿಕ ಕೊಡುಗೆ ನೀಡುವಂತೆ ಪ್ರೇರೇಪಿಸುವ ಉದ್ದೇಶ ಹೊಂದಿದೆ ಎಂದರು.
ಬ್ಯಾಕ್ ಟು ಊರು ಉದ್ಯಮಿಗಳಿಗೆ ಸನ್ಮಾನ:
ದೇಶ–ವಿದೇಶಗಳಲ್ಲಿ ಉದ್ಯಮ ಅಥವಾ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಮಂಗಳೂರಿನಲ್ಲಿ ಉದ್ಯಮ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಹತ್ತು ಮಂದಿ ಉದ್ಯಮಿಗಳನ್ನು ಕಂಬಳದ ಅದ್ದೂರಿ ವೇದಿಕೆಯಲ್ಲಿ ಗೌರವಿಸಲಾಯಿತು. ಈ ಮೂಲಕ ‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ಇನ್ನಷ್ಟು ಮಂಗಳೂರಿನ ಉದ್ಯಮಿಗಳು ತಾಯ್ನಾಡಿಗೆ ಮರಳುವಂತೆ ಪ್ರೇರಣೆಯಾಗಿರುವುದು ಈ ವರ್ಷದ ಮಂಗಳೂರು ಕಂಬಳದ ಪ್ರಮುಖ ವಿಶೇಷತೆಯಾಗಿದೆ.
ಈ ಸಂದರ್ಭ ಆನಂದ್ ಫೆರ್ನಾಂಡಿಸ್, ನಿತಿನ್ ರತ್ನಾಕರ್, ಬ್ರೂನೋ ಮಾರ್ಸೆಲ್ ಪ್ರಕಾಶ್ ಪಿರೇರಾ, ಶ್ರೇಯಾ ಶೆಟ್ಟಿ, ಅವಿನಾಶ್ ರಾವ್, ಸ್ಮಿತಾ ರಾವ್, ನಮಿತಾ ಪಿ.ಪಿ., ಸಂದೇಶ್ ಡಿ. ಪೂಜಾರಿ, ಸುಧಾಕರ್ ಪೂಂಜಾ ಹಾಗೂ ಅನ್ಸಾರ್ ಅಲಿ ಅವರನ್ನು ಕಂಬಳ ವೇದಿಕೆಯಲ್ಲಿ ಸನ್ಮಾನಿಸಲಾಯಿತು.


ಕಂಬಳಕ್ಕೆ ಮೆರುಗು ತಂದ ಬಾಕ್ಸರ್ ಮೇರಿ ಕೋಮ್:
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಈ ಬಾರಿಯ ಮಂಗಳೂರು ಕಂಬಳದಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಅವರಿಗೆ ಕಂಬಳದ ಬೆತ್ತ ಹಾಗೂ ಕಂಬಳ ಕೋಣಗಳ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನಾನು ಕೂಡ ಮಣಿಪುರದ ಸಣ್ಣ ಹಳ್ಳಿಯಿಂದ ಬಂದವಳು. ಇಂತಹ ಸಾಂಪ್ರದಾಯಿಕ ಕ್ರೀಡೆ ಆಯೋಜಿಸಿದ್ದಕ್ಕೆ ಅಭಿನಂದನೆಗಳು. ಮೊದಲ ಬಾರಿಗೆ ಕಂಬಳವನ್ನು ನೋಡುತ್ತಿದ್ದೇನೆ; ಇದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ನೀಡಿದೆ ಎಂದು ಮೇರಿ ಕೋಮ್ ಹೇಳಿದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಡಾ. ವೈ. ಭರತ್ ಶೆಟ್ಟಿ, ರಾಜೇಶ್ ನಾಯಕ್, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಬಿ. ನಾಗರಾಜ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಸೇರಿದಂತೆ ಹಲವು ಗಣ್ಯರು ಹಾಗೂ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.