ಮುಂಬಯಿ: ತುಳು ರಂಗಭೂಮಿ ಹಾಗೂ ಚಲನಚಿತ್ರ ಮಾಧ್ಯಮಕ್ಕೆ ಮುಂಬಯಿ ತುಳು ಕಲಾವಿದರ ಕೊಡುಗೆ ಅಪಾರ. ತಮ್ಮ ಹೊಟ್ಟೆಪಾಡಿನ ಹುಡುಕಾಟದಲ್ಲಿ ಮುಂಬಾಪುರಿ ಸೇರಿರುವ ಸಹಾಸಿ ತುಳುವರು ತಮ್ಮ ಬದುಕನ್ನು ರೂಪಿಸಿಕೊಳ್ಳವುದರ ಜತೆ ತಮ್ಮ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿರುವುದನ್ನು ಕಾಣಬಹುದು. ಇದೀಗ ಮುಂಬಯಿಯ ಕ್ರಿಯಾಶೀಲ ರಂಗನಟ, ಚಲನಚಿತ್ರ ನಟ ರಹೀಂ ಸಚೆರಿಪೇಟೆ ಅವರ 'ತನಿಂ ಫಿಲ್ಮ್ಸ್' ಪ್ರೊಡಕ್ಷನ್ ನಿರ್ಮಾಣದಲ್ಲಿ ತುಳು ಚಲನಚಿತ್ರ ರಂಗದಲ್ಲಿ ಹೊಸ ಮುನ್ನುಡಿ ಬರೆಯಲಿದೆ.

ಪ್ರೊಡಕ್ಷನ್ ನಂಬರ್ 1 ಇದು 'ತನಿಂ ಫಿಲ್ಮ್ಸ್' ಇವರ ಪ್ರಥಮ ಚಲನಚಿತ್ರ. ಮುಂಬಯಿ ತುಳು - ಕನ್ನಡ ರಂಗಭೂಮಿಯ ಸೃಜನಶೀಲ ರಂಗ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ಅವರ ನಿರ್ದೇಶನದ ಚಲನಚಿತ್ರದ ಮುಹೂರ್ತ 16, ಅಕ್ಟೋಬರ್ 2025ರಂದು ಶ್ರೀ ಧರ್ಮದೈವ ಜಾರಂದಾಯ ಸ್ಥಾನ ಪಿಲಾರ್ ಇಲ್ಲಿ ಕ್ಷೇತ್ರದ ಪೂಜಾರಿ ಗುಣಕರ ಪೂಜಾರಿ ಅವರು  ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ಸಾಯಿನಾಥ್ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಅವರು ಕ್ಯಾಮೆರಾ ಚಾಲನೆ ಮಾಡಿದರುದರೆ, ಚಾಲನೆ ಚಿತ್ರ ನಿರ್ಮಾಪಕ ನಟ ಡಾ| ರಾಜಶೇಖರ್ ಕೋಟ್ಯಾನ್ ಅವರು ಕ್ಲಾಪ್ ಮಾಡುವುದರ ಮೂಲಕ ಚಲನಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿತೈಷಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ನಾಗರಾಜ್ ಗುರುಪುರ ಅವರ ಡೋಲು ನಾಟಕ  ಆಧಾರಿತ ಈ ಚಲನಚಿತ್ರದ ಕತೆ - ಸಂಭಾಷಣೆ ಕ್ರಿಯಾಶೀಲ ರಂಗ ನಿರ್ದೇಶಕ ವಿದ್ದು ಅವರದ್ದು. ನಾಟಕಕಾರ ನಾರಾಯಣ ಶೆಟ್ಟಿ ನಂದಳಿಕೆ ಅವರ ಸಾಹಿತ್ಯದಿಂದ ಕೂಡಿರುವ ಈ ಚಿತ್ರದ ಡಿಓಪಿ ಹಾಗೂ ಸಂಕಲನದ ಕಾರ್ಯ ನಿರ್ವಹಿಸುವವರು ಪ್ರಜ್ವಲ್ ಸುವರ್ಣ. ಶ್ರುತಿನ್ ಶೆಟ್ಟಿ, ಕಿಶೋರ್ ಪಿಲಾರ್ ಇವರು ಪ್ರೊಡಕ್ಷನ್ ಮೆನೇಜರ್ ಆಗಿರುವ ಈ ಚಿತ್ರ ತಂಡದ ಮೇಕಪ್ ಮೆನ್ ಆಗಿರುವವರು ಮಂಜುನಾಥ್ ಶೆಟ್ಟಿಗಾರ್ ಹಾಗೂ ಸಂಗೀತದಲ್ಲಿ ಮುದನೀಡಲಿದ್ದಾರೆ ಶಿಣೋಯಿ ಜೋಸೆಫ್.

ತುಳುನಾಡಿನ ಸಾಂಸ್ಕೃತಿಕ ಬದುಕನ್ನು, ಪರಂಪರೆ, ನಂಬಿಕೆಗಳನ್ನು ಬಿಂಬಿಸುವ ಈ ಹೊಸ ಚಿತ್ರದಲ್ಲಿ ತಂಡದ ಮುಖ್ಯ ಭೂಮಿಕೆಯಲ್ಲಿ ತುಳು ರಂಗಭೂಮಿ ಕಂಡ ಮೇರು ವ್ಯಕ್ತಿತ್ವದ ವಿಜಯಕುಮಾರ್ ಕೊಡಿಯಾಲ್ ಬೈಲ್, ಮೋಹನ್ ಶೇಣಿ, ಉದಯ ಪೂಜಾರಿ ಬಲ್ಲಾಳ್ ಭಾಗ, ರೂಪ ವರ್ಕಾಡಿ, ನಿತೀಶ್ ಎಳಿಂಜೆ, ಜಯರಾಮ್ ಆಚಾರ್ಯ, ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಬಾಳಿಕೆ, ಕರ್ನೂರು ಮೋಹನ್ ರೈ, ಶಿವರಾಮ್ ಶೆಟ್ಟಿ ಕಾರ್ಯನಗುತ್ತು, ಅಶೋಕ್ ಕೊಡ್ಯಡ್ಕ, ಸುನೀಲ್, ನೀಲೇಶ್, ಜಗದೀಶ್, ಸದಾನಂದ, ಸುನೀತಾ ಸುವರ್ಣ, ದೀಕ್ಷಾ ದೇವಾಡಿಗ, ಪ್ರತಿಮಾ ಬಂಗೇರ, ಪ್ರವೀಣಾ ಶೆಟ್ಟಿ ಇನ್ನ, ಸುಜಾತಾ ಕೋಟ್ಯಾನ್ ಮೊದಲಾದವರು ಪಾತ್ರ ನಿರ್ವಹಿಸಲಿದ್ದಾರೆ. ಅಕ್ಟೋಬರ್ 16ರಿಂದ ನವೆಂಬರ್ 10ರ ವರೆಗೆ ತುಳುನಾಡಿನ ವಿವಿದೆಡೆಗಳಲ್ಲಿ ಚಿತ್ರೀಕರಣಗೊಳ್ಳಲಿರುವ ಈ ಚಿತ್ರ ಈಗಾಗಲೇ ಚಿತ್ರಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.