ಉಜಿರೆ: ಧರ್ಮಸ್ಥಳದ ಚತುರ್ವಿಧ ದಾನ ಪರಂಪರೆಯೊಂದಿಗೆ ಮಂದಿರಗಳು, ಚರ್ಚ್, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ, ಮದ್ಯವರ್ಜನ ಶಿಬಿರ, ಮಹಿಳಾ ಸಬಲೀಕರಣ, ಕೆರೆಗಳಿಗೆ ಕಾಯಕಲ್ಪ, ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಮೊದಲಾದ ಹತ್ತು-ಹಲವು ವಿಶಿಷ್ಠ ಸೇವಾಕಾರ್ಯಗಳ ಯಶಸ್ವಿ ಅನುಷ್ಠಾನದ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆದರ್ಶ ವ್ಯಕ್ತಿಯಾಗಿ ಎಲ್ಲರಿಂದಲೂ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಹೇಳಿದರು.

ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ ಹೆಗ್ಗಡೆಯವರ ಜೀವನ-ಸಾಧನೆ ಬಗ್ಯೆ “ಪೂಜ್ಯಪಥ” ಎಂಬ ಪುಸ್ತಕಪ್ರದರ್ಶನ ಮತ್ತು ಸಾಕ್ಷ್ಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಹೆಗ್ಗಡೆಯವರ ದಕ್ಷ ನಾಯಕತ್ವ ಹಾಗೂ ಸಾಧನೆಯನ್ನು ಮನ್ನಿಸಿ ಪ್ರಧಾನಿಯವರು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿರುವುದು ಅವರ ಸೇವೆಗೆ ಸಂದ ಗೌರವವಾಗಿದೆ ಎಂದು ಎ.ವಿ. ಶೆಟ್ಟಿ ಹೇಳಿದರು.

ಅಧ್ಯಕ್ಷತೆ ವಹಿಸಿದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಎಲ್ಲಾ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠ ದಾನವಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಶುಲ್ಕದಲ್ಲಿ ತಾಂತ್ರಿಕಶಿಕ್ಷಣ ನೀಡುತ್ತಿರುವ ಹೆಗ್ಗಡೆಯವರ ಹೃದಯಶ್ರೀಮಂತಿಕೆಯ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಎಸ್.ಡಿ.ಎಂ.ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕಕುಮಾರ್, ಪಾಲಿಟೆಕ್ನಿಕ್‌ನ ಪ್ರಬಂಧಕ ಚಂದ್ರನಾಥ ಜೈನ್, ಮಿಥುನ್‌ಕುಮಾರ್ ಮತ್ತು ಗ್ರಂಥಪಾಲಕಿ ನಮಿತಾ ಶೆಟ್ಟಿ ಉಪಸ್ಥಿತರಿದ್ದರು.

ಈಶ್ವರ ಶರ್ಮ ಸ್ವಾಗತಿಸಿದರು. ಸಂಪತ್‌ಕುಮಾರ್ ಧನ್ಯವಾದವಿತ್ತರು.

ಪುಸ್ತಕ ಪ್ರದರ್ಶನದ ಜೊತೆಗೆ ಹೆಗ್ಗಡೆಯವರು ಸೇವೆ-ಸಾಧನೆಯ ಬಗ್ಯೆ ಸಾಕ್ಷ್ಯಾಚಿತ್ರ ಪ್ರದರ್ಶನವೂ ನಡೆಯಿತು. 

ಹೆಗ್ಗಡೆಯವರ 58 ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭವು ಅ. 24 ರಂದು ಶುಕ್ರವಾರ ಧರ್ಮಸ್ಥಳದಲ್ಲಿ ನಡೆಯಲಿದೆ.