ವರದಿ ರಾಯಿ ರಾಜಕುಮಾರ
ಮೂಡುಬಿದಿರೆ ಮಹಾವೀರ ಪ್ರಥಮ ದರ್ಜೆ ಕಾಲೇಜು 60ನೇ ವರ್ಷದ ವರ್ಷಾಚರಣೆಯ ಸವಿನೆನಪಿಗಾಗಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಎಸ್ ಧರ್ಮ ಸಾಮ್ರಾಜ್ಯ ಸ್ಮಾರಕ ಗಾಂಧೀ ವಿಚಾರಧಾರೆಯ ಹೆಸರಿನಲ್ಲಿ ನಡೆಸುತ್ತಿದೆ. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶಿರ್ತಾಡಿ ಪ್ರಭಾ ಕ್ಲಿನಿಕ್ ನ ಡಾ.ಆಶೀರ್ವಾದ ಎಂ ಪಿ ಯವರು ಮಾತನಾಡಿ ಶಿಸ್ತು, ಸಂಯಮ, ಬದುಕಿಗೆ ಪೂರಕವಾಗುವ ಎಲ್ಲಾ ಮೌಲ್ಯಗಳನ್ನು ಕಲಿಸಿಕೊಟ್ಟ ಕಾಲೇಜು ಅತ್ಯುತ್ತಮವಾಗಿ ಮುಂದುವರೆಯುತ್ತಿರುವುದು ಸಂತೋಷಕರ ಸಂಗತಿ. ಯುವಜನತೆಯ ಚಿಂತನೆಗೆ, ತತ್ವ ಪ್ರಸರಣಕ್ಕೆ ಅವಕಾಶ ಒದಗಿಸಿದ ಕಾಲೇಜಿಗೆ ಶುಭವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಿರ್ತಾಡಿ ಸಂಪತ್ ಸಾಮ್ರಾಜ್ಯ ಅವರು ಗಾಂಧೀಜಿಯವರ ಬಾಲ್ಯದ ಘಟನೆಗಳ ಮಾಹಿತಿಯನ್ನು ನೀಡಿ ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಂಡ ಗಾಂಧೀಜಿಯವರ ಚಿತ್ರಣವನ್ನು ಸಭಿಕರೆದುರು ತೆರೆದಿಟ್ಟರು. ಅದೇ ರೀತಿ ಹಲವಾರು ಚಾರಿತ್ರಿಕ ಸಂಕೇತಗಳನ್ನು ಪ್ರಸ್ತುತಪಡಿಸಿ ಲೌಕಿಕ ಆಸೆಯನ್ನು ಇಲ್ಲದಂತಹ ಮಹಾನ್ ವ್ಯಕ್ತಿ ಗಾಂಧೀಜಿಯವರ ಆದರ್ಶ ಗ್ರಾಮದ ಕಲ್ಪನೆ, ಹಳ್ಳಿಯಿಂದ ದಿಲ್ಲಿಯ ಅಭಿವೃದ್ಧಿ ಸಾಧ್ಯ ಎನ್ನುವ ಗ್ರಾಮ ಸ್ವರಾಜ್ ಬಗ್ಗೆ ಮಾಹಿತಿಯನ್ನು ಒದಗಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಧರ್ಮಸಾಮ್ರಾಜ್ಯರ ಆಸೆಯಂತೆ ಗ್ರಾಮೀಣ ಸ್ವಾಭಿಮಾನಿ ಪರಿಕಲ್ಪನೆಯಲ್ಲಿ ಬದುಕುತ್ತಿರುವ ಸಂಪತ್ ಸಾಮ್ರಾಜ್ ರನ್ನು ಕೊಂಡಾಡಿದರು. ಅಗರ್ಭ ಶ್ರೀಮಂತರಾಗಿದ್ದು ಸಾಮಾನ್ಯರ ಬದುಕಿಗೆ ದಾರಿದೀಪವಾದ ಗಾಂಧೀಜಿಯವರು ಎಲ್ಲರಿಗೂ ಆದರ್ಶಪ್ರಾಯರು ಎಂದರು.
ಸ್ವಾಗತ ಭಾಷಣವನ್ನು ಮಾಡಿದ ಡಾ. ರಾಧಾಕೃಷ್ಣ 18 ವರ್ಷಗಳಿಂದ ನಿರಂತರವಾಗಿ ಮಾಜಿ ಶಾಸಕರ ಹೆಸರಲ್ಲಿ ಸ್ಪರ್ಧೆಯನ್ನು ಆಯೋಜಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ಕುಮಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ಹರೀಶ್, ಪಿಯು ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಾಕ್ಷಿ ಶೆಟ್ಟಿ ಹಾಗೂ ಸಾಕ್ಷಿ ವೇದಿಕೆಯಲ್ಲಿ ಹಾಜರಿದ್ದರು., ಮಾನವಿಕ ಸಂಘದ ಗೀತಾ ರಾಮಕೃಷ್ಣ ವಂದಿಸಿದರು.