ಮುಂಬಯಿ (ಆರ್‍ಬಿಐ), ಸೆ.27: ಕರ್ನಾಟಕ ಸರ್ಕಾರದ ಎಂಎಲ್‍ಸಿ ಐವಾನ್ ಡಿ'ಸೋಜಾ ಮತ್ತು ಮುಂಬಯಿ ಕಾಂಗ್ರೆಸ್ (ಐ) ಪಕ್ಷದ ಹಾಲಿ ಹಿರಿಯ ಉಪಾಧ್ಯಕ್ಷೆ, ಮಾಜಿ ಮಹಿಳಾ ಅಧ್ಯಕ್ಷೆ ಜಾನೆಟ್ ಎಲ್.ಡಿ'ಸೋಜಾ ಅವರು ಮುಂಬಯಿ ಕೊಲಬಾ ಇಲ್ಲಿನ ಆರ್ಚ್‍ಬಿಷಪ್‍ರ ಅಧಿಕೃತ ನಿವಾಸ ಆರ್ಚ್ ಬಿಷಪ್ ಹೌಸ್‍ಗೆ ಭೇಟಿ ನೀಡಿ ಆರ್ಚ್‍ಬಿಷಪ್ ರೈ| ರೆ| ಡಾ| ಓಸ್ವಾಲ್ಡ್ ಗ್ರೇಷಿಯಸ್ ಅನುಗ್ರಹ ಪಡೆದುಕೊಂಡರು. 

ಐವಾನ್ ಡಿ'ಸೋಜಾ ಮತ್ತು ಜಾನೆಟ್ ಡಿ'ಸೋಜಾ ಆರ್ಚ್‍ಬಿಷಪ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಅಂತೆಯೇ ಆರ್ಚ್‍ಬಿಷಪ್‍ರೂ ಇವರನ್ನು ಸತ್ಕರಿಸಿ ಗೌರವಿಸಿ ಭವಿಷ್ಯತ್ತಿನ ರಾಜಕೀಯ ಸೇವೆಗೆ ಶುಭಾರೈಸಿದರು. ಹಾಗೂ ಕುಶಲೋಪರಿ ವಿಚಾರಿಸಿ ಶೀಘ್ರದಲ್ಲೇ ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದರು. 

ನಂತರ ಜಾನೆಟ್ ಡಿ'ಸೋಜಾ ನೇತೃತ್ವದ ಕ್ರಿಶ್ಚಿಯನ್ ನಿಯೋಗವು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪಟೋಲೆ ಅವರನ್ನು ಭೇಟಿಗೈದು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕ್ರಿಶ್ಚಿಯನ್ ಪ್ರಾತಿನಿಧ್ಯಕ್ಕಾಗಿ ವಿನಂತಿಸಿತು. ಮುಖಂಡರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕ್ರಿಶ್ಚನ್ ಸಮುದಾಯಕ್ಕೆ ಭರವಸೆಯ ಬೆಂಬಲವನ್ನು ವ್ಯಕ್ತಪಡಿಸಿದರು.