ಮಂಗಳೂರು ನ. 28: ಶಕ್ತಿ ವಸತಿ ಶಾಲೆ ಹಾಗೂ  ದಕ್ಷಿಣಕನ್ನಡ ಜಿಲ್ಲೆಯ ಐಸಿಎಸ್‍ಇ ಮತ್ತು ಸಿಬಿಎಸ್‍ಇ ಶಾಲೆಗಳ ಸಂಘ 'ಐಕ್ಸ್' ಇವರ ಸಹಯೋಗದಲ್ಲಿ 'ಶಕ್ತಿ ರೈಸ್‍ ಆಂಡ್ ಸ್ಪೈಕ್' ಅಂತರ್ ಶಾಲಾ ಬಾಲಕರ 14 ವಯೋಮಾನ ಹಾಗೂ 17 ರ ಒಳಗಿನ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವು ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.

ಇದರ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತಸಿ ಎ ಹಾಗೂ ಇಂಡಿಯನ್‍ ರೆಡ್‍ಕ್ರಾಸ್ ಸೊಸೈಟಿ ದಕ್ಷಿಣಕನ್ನಡ ಇದರ ಅಧ್ಯಕ್ಷರಾದ  ಶಾಂತಾರಾಮ್ ಶೆಟ್ಟಿ ಅವರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾದ  ಪಾರಿವಾಳಗಳನ್ನು ಹಾರಿಸುವ ಮೂಲಕ 'ಶಕ್ತಿ  ರೈಸ್‍ ಆಂಡ್ ಸ್ಪೈಕ್ ' ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಕ್ತಿ ಶಾಲೆಯು ಕೇವಲ ಪರೀಕ್ಷೆಯ ದೃಷ್ಟಿಯಿಂದ ಮಕ್ಕಳನ್ನು ತಯಾರು ಮಾಡುವುದಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಅದರಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ಶಕ್ತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಗಮನಾರ್ಹವಾದದ್ದು ಎಂದರು. ಜಿಲ್ಲಾ ಮಟ್ಟದ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳ ಬಾಲಕರ ವಾಲಿಬಾಲ್ ಪಂದ್ಯಾಟವು ಯಶಸ್ವಿಯಾಗಿ ನಡೆಯಬೇಕೆಂದು ಶುಭ ಹಾರೈಸಿದರು. ಆಟಗಾರರಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಸೋಲು ಗೆಲುವಿನ ಬಗ್ಗೆ ಯೋಚಿಸದೆ ಮುನ್ನುಗ್ಗುತ್ತಿರಬೇಕು ಎಂದು ಹೇಳಿದರು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸೇರಿ ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಬಳಿಕ ಅಧ್ಯಕ್ಷೀಯ ನುಡಿಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾದ  ರಮೇಶ್ ಕೆ ಅವರು ವಿದ್ಯಾರ್ಥಿಗಳ ಹುಮ್ಮಸ್ಸು, ಆಸಕ್ತಿ ನೋಡಿದರೆ ತುಂಬಾ ಸಂತೋಷವಾಗುತ್ತದೆ. ಇದೇ ಹುಮ್ಮಸ್ಸು, ಆಸಕ್ತಿ ಇನ್ನು ಮುಂದೆಯೂ ಸದಾ ನಿಮ್ಮಲ್ಲಿರಲಿ. ನೀವು ಸೋತರೂ ಆ ಸೋಲಿಗೆ ಭಯ ಪಡದೆ ಅದನ್ನೇ ನಿಮ್ಮ ಮುಂದಿನ ಗೆಲುವಿನ ಮೆಟ್ಟಿಲಾಗಿಸಬೇಕು ಎಂದು ಹೇಳುತ್ತಾ ಎಲ್ಲಾ ಕ್ರೀಡಾಪಟುಗಳಿಗೆ ಶುಭವನ್ನು ಹಾರೈಸಿದರು. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ  ವೆಂಕಟೇಶ್ ಮೂರ್ತಿ ಹೆಚ್‍ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ  ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಬಬಿತಾ ಸೂರಜ್ ಸ್ವಾಗತ ಭಾಷಣವನ್ನು ಮಾಡಿ ಎಲ್ಲಾ ಕ್ರೀಡಾಪಟುಗಳಿಗೆ ಶುಭವನ್ನು ಹಾರೈಸಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕಿ  ಚೇತನಾ ತಲಪಾಡಿ ನಿರೂಪಣೆಯನ್ನು ಮಾಡಿದರು.