ಮಂಗಳೂರು: ಕರಾವಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಬಂದರು, ರೈಲ್ವೇ ಎಲ್ಲವೂ ಇದ್ದರೂ ನಿರೀಕ್ಷಿಸಿದ ಪ್ರವಾಸಿಗರು ಇಲ್ಲಿಗೆ ಬರುತ್ತಿಲ್ಲ. ಕೋಮು ವಿಚಾರಗಳಿಂದ ಪ್ರವಾಸೋದ್ಯಮಕ್ಕೆ ತೊಡಕುಂಟಾಗುತ್ತಿದೆ. ಆದರೆ ಸದ್ಯ ವಿಚಾರಗಳು ನಶಿಸುತ್ತಿದ್ದು, ಶೀಘ್ರದಲ್ಲೇ ಕರಾವಳಿಗೆ ಪ್ರವಾಸಿಗರ ದಂಡು ಹರಿದುಬರುವ ದಿನಗಳು ದೂರವಿಲ್ಲ ಎಂದು ದಾಯ್ಜಿವಲ್ಡ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಟೂರಿಸಂ ಆಂಡ್ ಮ್ಯಾನೇಜ್‍ಮೆಂಟ್ ಹಾಗೂ ಸರಕಾರದ ಪ್ರವಾಸೋದ್ಯಮ ಇಲಾಖೆ ಇದರ ಆಶ್ರಯದಲ್ಲಿ ಶುಕ್ರವಾರ ವಿವಿಯ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ 2024 ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸುಂದರವಾಗಿರುವಿರಿ ಅಂದರೆ ಅದು ದೇವರ ದಯೆ, ಅದೇ ಸುಂದರವಾಗಿ ಬದುಕುತ್ತೀರಾ ಅಂದಲ್ಲಿ ಅದು ದೇವರಿಗೆ ನೀವು ನೀಡುವ ಉಡುಗೊರೆಯಾಗಿರುತ್ತದೆ. ಇನ್ನೊಬ್ಬರಿಗೆ ಸಹಾಯಹಸ್ತ ಚಾಚುವುದೇ ಸೌಂದರ್ಯ ವಾಗಿರುತ್ತದೆ. ಇಂತಹ ಅಮೂಲ್ಯ ಗುಣಗಳು ಜೀವನದ ಯಶಸ್ಸು ಕಾಣಲು ಸಾಧ್ಯ. ಕರಾವಳಿ ಅಂದಲ್ಲಿ ಸುಂದರ ಪ್ರಕೃತಿ, ಸಮುದ್ರಗಳು, ದೇವಸ್ಥಾನಗಳು, ಮಸೀದಿಗಳು, ಇಗರ್ಜಿಗಳು ಇರುವಂತಹ ವಿಶೇಷ ತಾಣಗಳ ಜೊತೆಗೆ ಮಾನವೀಯ ಹೃದಯದವರು ಅನೇಕರಿರುವಂತಹ ನಾಡಿನಲ್ಲಿ ಪ್ರವಾಸೋದ್ಯಮ ಸ್ಪಾಟ್ ಅನ್ನಲು ಯಾವುದೇ ಹಿಂಜರಿಕೆಗಳು ಇಲ್ಲ. ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕದಿರಿ, 2007ರಲ್ಲಿ ಉತ್ತಮ ವೇತನದ , ಕುಟುಂಬ ಸಮೇತ ವಾಸ್ತವ್ಯದ ಉದ್ಯೋಗ ವಿದೇಶದಲ್ಲಿತ್ತು. ಜೀವನದ ದೊಡ್ಡ ರಿಸ್ಕ್, ರಿಸ್ಕನ್ನೇ ತೆಗೆದುಕೊಳ್ಳದಿರುವುದು. ತಪ್ಪುಗಳಿಂದ ಕಲಿಯುತ್ತೇವೆ, ಗಲ್‍ತೀ ಕರ್ ನಾ ಪ್ರಕೃತಿ ಹೇ, ಗಲ್‍ತೀ ಮಾನ್ ನಾ ಸಂಸ್ಕೃತಿ ಹೇ, ಗಲ್ ತೀ ಸುಧಾರ್ ನಾ ಪ್ರಗತೀ ಹೈ ಎಂದ ಅವರು ಪ್ರವಾಸಿ ಸ್ಥಳದ ಸುರಕ್ಷತೆ ಅಗತ್ಯವಿದೆ. ಹಿಂದೆ ಪ್ರವಾಸಿಗಳಿಗೆ ಇದ್ದಂತಹ ಸ್ಟಾರ್ ಪ್ರದೇಶಗಳು ಈಗ ಪಾಳುಬಿದ್ದಿವೆ. ಪ್ರವಾಸೋದ್ಯಮ ಶಾಂತಿಯನ್ನು ಪ್ರತಿಪಾದಿಸಬಲ್ಲದು, ಶಾಂತಿ ಪ್ರವಾಸೋದ್ಯಮವನ್ನು ಪ್ರತಿಪಾದಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ|ಪಿ.ಎಲ್ ಧರ್ಮ ಮಾತನಾಡಿ ಮನಶಾಂತಿಯನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗುವುದಕ್ಕಿಂತ ಮೊದಲು ನಮ್ಮೊಳಗೆ ಹಾಗೂ ಪರಿಸರದಲ್ಲಿ ಶಾಂತಿಯ ಸ್ಥಾಪನೆಯೊಂದಿಗೆ ಪ್ರವಾಸೋದ್ಯಮ ದಿನಾಚರಣೆಯನ್ನು ಪ್ರೀತಿ, ಶಾಂತಿ, ಸೌಹಾರ್ದತೆಯ ಮೂಲಕ ಆಚರಿಸೋಣ ಎಂದ ಅವರು ಹಿಂದೆ ಎಲ್ಲಾ ಧರ್ಮದವರು ಯಾವುದೇ ಜಾತಿ ಬೇಧವಿಲ್ಲದೆ ಪರಸ್ಪರ ಒಟ್ಟಾಗಿ ಜೀವಿಸಿದ್ದರು ಜೊತೆಗೆ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸೌಹಾರ್ದತೆ ಮರೀಚಿಕೆಯಾಗಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕೆಲವೊಂದು ಪ್ರವಾಸೋದ್ಯಮ ಕ್ಷೇತ್ರಗಳು ಅಶಾಂತಿಯ ಕಾರಣದಿಂದಲೇ ಸೊರಗಿ ಹೋಗುತ್ತವೆ. ಆದ್ದರಿಂದ ಸೌಹಾರ್ದತೆಯ ಸಮಾಜವನ್ನು ಕಟ್ಟುವುದರೊಂದಿಗೆ, ಪ್ರಸ್ತುತ ಕಾಲಘಟ್ಟದಲ್ಲಿ ಭಾರೀ ಬೇಡಿಕೆಯಿರುವ ಪ್ರವಾಸೋದ್ಯಮವನ್ನು ಬೆಳೆಸೋಣ ಎಂದರು.
ಮಂಗಳೂರು ವಿವಿ ಪ್ರಾಧ್ಯಾಪಕರು ವಾಣಿಜ್ಯ ವಿಭಾಗದ ಡೀನ್ ಪೆÇ್ರ.ಪುಟ್ಟಣ್ಣ ಅವರು ಮಾತನಾಡಿ, ಪ್ರವಾಸೋದ್ಯಮವು ವಿಶ್ವದಲ್ಲೇ ಶ್ರೀಮಂತ ಉದ್ಯಮವಾಗಿದೆ. ಸುಸ್ಥಿರ ಪ್ರವಾಸೋದ್ಯಮಕ್ಕೆ ಹೆಚ್ಚಿ ನ ಆದ್ಯತೆ ನೀಡಿ ನಾವು ಮುನ್ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಅಧ್ಯಕ್ಷರಾದ ಡಾ.ಶೇಖರ್ ಅವರು ಸ್ವಾಗತಿಸಿದರು. ಎಂಬಿಎ ಟೂರಿಸಂ ವಿಭಾಗದ ಸಂಯೋಜಕರಾದ ಡಾ.ಜೋಸೆಫ್ ಡಿ ಅವರು ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದಾಯ್ಜಿವಲ್ಡ್ ಸ್ಥಾಪಕ ಅಧ್ಯಕ್ಷ ವಾಲ್ಟರ್ ನಂದಳಿಕೆ ಅವರನ್ನು ಅಭಿನಂದಿಸಲಾಯಿತು.