ಮೂಡುಬಿದಿರೆ: ಸ್ಥಳೀಯ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ, ಪ್ರಾಂತ್ಯದಲ್ಲಿ ಜೂನ್ 15ರಂದು ಎಲ್ಲ ವಿದ್ಯಾರ್ಥಿಗಳಿಗೆ ಕೊಡಂಗಲ್ಲು ಶ್ರೀಮತಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಬರೆಯುವ ಪುಸ್ತಕವನ್ನು ವಿತರಿಸಲಾಯಿತು. ಇದರ ಪೂರ್ಣ ಪ್ರಾಯೋಜಕತ್ವವನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಪುಸ್ತಕವನ್ನು ವಿತರಿಸಿ ಧನಲಕ್ಷ್ಮಿ ಗೇರುಬೀಜ ಉದ್ದಿಮೆಯ ಮುಖ್ಯಸ್ಥ ಲಯನ್ ಶ್ರೀಪತಿ ಭಟ್ ಅವರು ಮಾತನಾಡಿದರು.


ಅವರು ತಮ್ಮ ಭಾಷಣದಲ್ಲಿ ಜಾತಿ, ವರ್ಗ ರಹಿತ ವಿದ್ಯಾ ದೇಗುಲ ಸದಾ ಕಾಲ ಬೆಳಗಬೇಕು. ತಂತ್ರಜ್ಞಾನದ ಮೂಲಕ ಎಲ್ಲವೂ ತಿಳಿಯುವ ಇಂದಿನ ದಿನಗಳಲ್ಲಿ ಅಂತಹ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹವನ್ನು ಕೊಡುವುದಕ್ಕಾಗಿ ನಮ್ಮ ಟ್ರಸ್ಟ್ ಮೂಲಕ ಸರಕಾರಿ ಶಾಲಾ ಪ್ರಾಥಮಿಕ ಶಿಕ್ಷಣದ ಎಲ್ಲ ಮಕ್ಕಳಿಗೆ ಸಹಕಾರವನ್ನು ನೀಡಿ 2012 ರಿಂದ ಬೆಂಬಲಿಸಲಾಗುತ್ತಿದೆ ಎಂದರು.
ಮೂಡುಬಿದಿರೆ ರೋಟರಿ ಟೆಂಪಲ್ ಟೌನ್ ನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಬ್ಯಾಗ್ ವಿತರಿಸಿ ಮಾತನಾಡಿದ ಉದ್ಯಮಿ ಪೂರ್ಣ ಚಂದ್ರ ಜೈನ್ ಅವರು ಮಾತನಾಡಿ ವಿದ್ಯಾಕಾಶಿ ಮೂಡುಬಿದಿರೆಯ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಸ್ತುತ್ಯರ್ಹರು ಎಂದು ಅಭಿವಂದನೆ ಸಲ್ಲಿಸಿದರು.

ಆಂಗ್ಲಮಾಧ್ಯಮ ಕೇವಲ ಅಂತಸ್ತು ತೋರಿಕೆಗೆ ಮಾತ್ರ ಇದ್ದು ನಿಜವಾಗಿ ಸ್ವಂತ ಉದ್ದಿಮೆ ಮಾಡಿ ಹೆಚ್ಚು ಪ್ರತಿಭೆಯನ್ನು ತೋರಿಸುತ್ತಿರುವವರು ಕನ್ನಡ ಮಾಧ್ಯಮದಲ್ಲಿ ಕಲಿತವರು. ಆದುದರಿಂದ ಕನ್ನಡ ಮಾಧ್ಯಮದವರಿಗೆ ಉತ್ತಮ ಭವಿಷ್ಯವಿದೆ ಎಂದು ಪುಸ್ತಕವನ್ನು ವಿತರಿಸಿ ಲಯನ್ಸ್ ಉಪಾಧ್ಯಕ್ಷ ಶಿವಪ್ರಸಾದ್ ಹೆಗಡೆಯವರು ಶುಭಹಾರೈಸಿದರು. ನಿವೃತ್ತ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ಮೂಡುಬಿದಿರೆ ಯವರು ಹೆತ್ತವರಿಗೆ ಅವರ ಜವಾಬ್ದಾರಿ ಹಾಗೂ ಶಾಲಾ ಒಟ್ಟಂದ ಹೆಚ್ಚಿಸಲು ಕೈಗೊಳ್ಳಲು ಬೇಕಾದ ಕ್ರಮಗಳನ್ನು ಮನದಟ್ಟು ಮಾಡಿಕೊಟ್ಟರು.

ಅತಿ ಹೆಚ್ಚು ಸಂಖ್ಯೆಯಲ್ಲಿ ಹೆತ್ತವರು ಶಾಲೆಗೆ ಆಗಮಿಸಿ ಬೆಂಬಲಿಸುತ್ತಿರುವುದು ಅಭಿನಂದನಾರ್ಹ ಎಂದು ಶಾಲೆಗೆ ಧ್ವಜಸ್ತಂಭ ಕೊಡುಗೆಯನ್ನು ನೀಡಿದ ಸುಭಾಷ್ ಚಂದ್ರ ಚೌಟ ನುಡಿದರು.

ಹೆತ್ತವರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಉತ್ತಮ ವಿದ್ಯಾಭ್ಯಾಸ ಪಡೆಯಲು ಪ್ರೇರೇಪಿಸಬೇಕೆಂದು ಪುರಸಭಾ ಸದಸ್ಯ ಇಕ್ಬಾಲ್ ಕಾಸಿಂ ಹೆತ್ತವರನ್ನು ಕೇಳಿಕೊಂಡರು . ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಜೋಸ್ಸಿ ಮಿನೇಜಸ್, ರೋಟರಿ ಸದಸ್ಯರಾದ ಬಲರಾಮ್, ಕಾರ್ಯದರ್ಶಿ ಹರೀಶ್, ಸದಸ್ಯರಾದ ವಿಠಲ ಪೂಜಾರಿ, ಭೋಜ ಸಾಲಿಯಾನ್ ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕ ಸುಧಾಕರ ಸಾಲಿಯಾನ್ ಸ್ವಾಗತಿಸಿದರು. ಶಿಕ್ಷಕಿ ಜಾಯ್ಸ್ ಡಿಸೋಜ ಕಾರ್ಯಕ್ರಮ ನಿರ್ವ ಹಿಸಿದರು. ಸುಜಾತ ಧನ್ಯವಾದವಿತ್ತರು.
ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.