ಮಂಗಳೂರು: "ಕಳೆದ 40 ವರ್ಷಗಳಿಂದ ಸರ್ಕಾರ ತನ್ನ ಕಾಮಗಾರಿಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಗುತ್ತಿಗೆದಾರರಿಗೆ ಬಿಲ್‌ ಗಳನ್ನು ಪಾವತಿಸುವ ಸಮಯದಲ್ಲಿ ಕಟ್ಟಡದ ಕಲ್ಲಿನ ಸಾಮಗ್ರಿಗಳ ರಾಜಧನವನ್ನು ಕಡಿತಗೊಳಿಸಲು ಸರ್ಕಾರಿ ವೇದಾಸ್ (ವರ್ಕ್  ಎಕ್ಸಿಕ್ಯೂಟಿಂಗ್ ಡಿಪಾರ್ಟ್‌ಮೆಂಟ್ ಮತ್ತು ಏಜೆನ್ಸಿಗಳು) ಗೆ ಅನುಮತಿ ನೀಡಿದ್ದು ಇಂದಿನವರೆಗೆ ಆಚರಣೆಯಲ್ಲಿದೆ. ಈಗ ಸರ್ಕಾರವು ಈಗಾಗಲೇ ಸಂಗ್ರಹಿಸಿರುವ ರಾಜಧನವನ್ನು ಪುನಹ: ಕ್ವಾರಿ ಮಾಲೀಕರಿಗೆ ನೀಡುವಂತೆ ಬೇಡಿಕೆಗಳನ್ನು ಎತ್ತಿರುತ್ತದೆ. ಇದು ಆಚರಣೆಗೆ ಬಂದಲ್ಲಿ ಕ್ವಾರಿ ಮಾಲೀಕರು ದಿವಾಳಿಯಾಗುತ್ತಾರೆ ಮತ್ತು ರೈತರಂತೆ ಆತ್ಮಹತ್ಯೆಗೆ ಕಾರಣವಾಗಬಹುದು" ಎಂದು ದ.ಕ.-ಉಡುಪಿ ಸ್ಟೋನ್ ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಶೆಟ್ಟಿ ಹೇಳಿದ್ದಾರೆ. 

"ಕಾನೂನು ಬದ್ಧವಾಗಿ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ನಡೆಸಲು ಕೆಎಂಎಂಸಿಆರ್ ನಿಯಮಗಳಲ್ಲಿ ತೀವ್ರ ಬದಲಾವಣೆಗಳ ಅಗತ್ಯವಿದೆ ಮತ್ತು ಇದನ್ನು ಉದ್ಯಮದೊಂದಿಗೆ ಸಮಾಲೋಚಿಸಿ ಮಾಡಬೇಕು. ಕೆಎಂಎಂಸಿಆರ್‌ ಗೆ ಅಗತ್ಯವಾದ ತಿದ್ದುಪಡಿಗಳನ್ನು ತರದೆ ಕೆಎಸ್‌ ಆರ್‌ ಎಸ್‌ ಎಸಿಗೆ ಗುತ್ತಿಗೆ ನೀಡುವ ಮೂಲಕ ಸರ್ಕಾರವು ದುಡುಕುತ್ತಿದೆ, ಇದು ಉದ್ಯಮಕ್ಕೆ ಮತ್ತು ಇಡೀ ರಾಜ್ಯದ ಅಭಿವೃದ್ಧಿಗೆ ಮಾರಕ ದಿನವನ್ನು ನೀಡಬಹುದು.  ಕೆಎಂಎಂಸಿಆರ್ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಕೇಂದ್ರಕ್ಕೆ ನೀಡಿರುವ ಗುತ್ತಿಗೆಯನ್ನು ಸ್ಥಗಿತಗೊಳಿಸಬೇಕು" ಎಂದು ಅವರು ಹೇಳಿದರು.

ಡಿ.21ರಂದು ಬೆಳಗಾವಿಯಲ್ಲಿ ನಡೆದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಷಿಯೇಷನ್ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಟೋನ್ ಕ್ರಷರ್ ಅಸೋಷಿಯೇಷನ್ ಮಂಗಳೂರು ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದು ಕರ್ನಾಟಕ ಉಪಖನಿಜ ರಿಯಾಯಿತಿ 1994 ನಿಯಮಗಳಲ್ಲಿರುವ ನ್ಯೂನ್ಯತೆಗಳು ಹಾಗೂ ಅದರಿಂದ ಗುತ್ತಿಗೆದಾರರಿಗೆ ಆಗುವ ತೊಂದರೆಗಳನ್ನು ಸರಿಪಡಿಸುವವರೆಗೆ ರಾಜ್ಯ ವ್ಯಾಪಿ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳನ್ನು ಸ್ಥಗಿತಗೊಳಿಸಲು ಕರೆ ನೀಡಲಾಗಿದೆ.  ಈ ಕೂಡಲೇ ಸಂಬಂಧಪಟ್ಟ ಸರಕಾರ, ಇಲಾಖೆಗಳು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗಿ ಮನವಿ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕೋಶಾಧಿಕಾರಿ ಶಾಜು ನೀಲಿಯಾರ, ಸಂಘಟನೆಯ ಕಾರ್ಯದರ್ಶಿ ಮೋಹನ್ ಅಮೀನ್, ಪ್ರಸಾದ್ ಮೇಲಾಂಟ, ರಾಧಾಕೃಷ್ಣ ನಾಯಕ್, ಜಯಶೀಲ ಅಡ್ಯಂತಾಯ, ಅಬ್ದುಲ್ ನಾಸಿರ್ ಉಪಸ್ಥಿತರಿದ್ದರು.