ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಹೊಸ ರೂವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಈ ವರುಷವೂ ದಸರಾ ಮೆರವಣಿಗೆಯು ನಗರಕ್ಕೆ ರಂಗು ತುಂಬಿ ಬುಧವಾರ ಮುಂಜಾವ ಕ್ರಮವಾಗಿ ಮುಕ್ತಾಯ ಕಂಡಿತು. ನಾರಾಯಣ ಗುರುಗಳು, ಶಾರದೆ, ನವದುರ್ಗೆಯರು, ನಾನಾ ಸ್ತಬ್ಧ ಚಿತ್ರಗಳು, ಬಣ್ಣದ ಕೊಡೆಗಳು, ಡೋಲು ವಾದ್ಯಗಳು, ಕುಣಿತಗಳು ಉದ್ದಕ್ಕೂ ಇದ್ದು ದೇಶ ವಿದೇಶಗಳ ಜನರು ಇದನ್ನು ದಾರಿಯುದ್ದಕ್ಕೂ ಕಂಡು  ಕಣ್ತುಂಬಿಕೊಂಡರು.

ಕುದ್ರೋಳಿ ದೇವಾಲಯದಿಂದ ಹೊರಟ ಶೋಭಾ ಯಾತ್ರೆಯು ಲೇಡಿ ಹಿಲ್, ಮಹಾನಗರ ಪಾಲಿಕೆ, ಮಹಾತ್ಮಾ ಗಾಂಧಿ ರಸ್ತೆ, ನವಭಾರತ ಸರ್ಕಲ್, ಕೆ. ಎಸ್. ರಾವ್ ರಸ್ತೆ, ವಿವಿ ಕಾಲೇಜು, ಭವಂತಿ ರಸ್ತೆ, ತೇರು ಬೀದಿ, ಬಾಸೆಲ್ ಮಿಶನ್ ಮೂಲ ಶಾಲೆ, ಅಳಕೆ ದಾಟಿ ದೇವಸ್ಥಾನ ಮುಟ್ಟಿತು. ಒಂಬತ್ತು ಕಿಲೋಮೀಟರ್ ಶೋಭಾ ಯಾತ್ರೆಯ ಉದ್ದಕ್ಕೂ ಜನರು ಶ್ರದ್ಧಾ ಭಕ್ತಿಗಳಿಂದ ಕಾದು ನೋಡಿದರು.

ಬುಧವಾರ ಮುಂಜಾವ ಮೂರ್ತಿಗಳನ್ನು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಕೆರೆಯಲ್ಲಿ ಮುಳುಗಿಸುವುದರೊಂದಿಗೆ ಈ ವರುಷದ ಮಂಗಳೂರು ದಸರಾ ಅದ್ಭುತವಾಗಿ ಕೊನೆಗೊಂಡಿತು.