ನಿನ್ನ ನಗೆ ಮಲ್ಲಿಗೆಯ ಪರಿಮಳದ ಪಾತ್ರೆಯಲಿ...
ಮುಳುಗುತ್ತಿರುವ ದಿನಕರನ ಲೀಲೆ ಕಾಣುತ್ತ, ಹಸಿರಸಿರು ತೋಟದ ಬದಿಯ ಕಲ್ಲುಕಟ್ಟೆಯ ಮೇಲೆ "ಬದುಕಲು ಕಲಿಯಿರಿ _ಸ್ವಾಮಿ ಜಗದಾತ್ಮಾನಂದ" ಅವರ ಪುಸ್ತಕ ಹಿಡಿದು ಕುಳಿತು, ಸಂಜೆ ಮಲ್ಲಿಗೆ ಮೊಗ್ಗಂತೆ ಕಂಗೊಳಿಸುತ್ತಿದ್ದವಳನ್ನು ಕೆಣಕುವ ಮನಸಾಗಿತ್ತು ಹುಡುಗನಿಗೆ. ಕೈಯಲ್ಲಿನ ಪುಸ್ತಕ ಕಿತ್ತುಕೊಂಡು ತಾನೋದುವಂತೆ ನಟಿಸಲು ಅವಳೆದುರಿಗೆ ಕುಳಿತ.
ಅಸಹನೆಯಿಂದಲೇ ಕತ್ತೆತ್ತಿದವಳೊಳಗೆ ಎದುರು ಕುಳಿತವನನ್ನು ಕಂಡು, ಕಾಣದ ಕಂಪನ...ಅದನ್ನು ತೋರಗೋಡದೆ ಎಂದಿನಂತೆ ತನ್ನ ಹಳೆ ವರಸೆ ತೆಗೆದಿದ್ದಳು ಹುಡುಗಿ. " ನೆಮ್ಮದಿಯಾಗಿರುವವರನ್ನು ಕಂಡರೆ ಸಹಿಸಲಾಗದ ನಿನಗೆ..?"
" ಎಲ್ಲರನ್ನಲ್ಲ. ನಿನ್ನನ್ನು ಕಂಡರೆ ಮಾತ್ರ ಸಹಿಸಲಾಗದು ಅಷ್ಟೇ.. " ಮೈ ಉರಿಸುವುದರಲ್ಲಿ ಸೇರಿಗೆ ಸವ್ವಾಸೇರು ಎನ್ನುವವನಾತ.
" ಮರ್ಯಾದೆಯಾಗಿ ಆ ಬುಕ್ ಕೊಟ್ಟು ಇಲ್ಲಿಂದ ತೊಲಗು. ಇವತ್ತು ಒಳ್ಳೆಯ ಲಹರಿಯಲ್ಲಿದ್ದೇನೆ.. ಹಾಳುಗೆಡವಿದರೆ ನಿನ್ನ ಗ್ರಹಚಾರ ಬಿಡಿಸುವೆ ಈಡಿಯಟ್.. "
" ನನ್ನ ಪ್ರಶ್ನೆಗಳಿಗೆಲ್ಲ ಉತ್ತರ ಕೊಡು ಮೊದಲು..ಆಮೇಲೆ ಹೋಗೋದ ಬೇಡ್ವಾ ಯೋಚಿಸ್ತೀನಿ."
" ಏನದು ಹೇಳು ಬೇಗ..? "
" ನಿನಗೆ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ನಂಬಿಕೆ ಹೆಚ್ಚೆ ಇದೆ ಅಂತ ಗೊತ್ತು. ಈ ಜಾತಿ ಧರ್ಮಗಳು, ಆಚರಣೆಗಳ ಬಗ್ಗೆ ನಿನ್ನ ಮುಕ್ತ ಅಭಿಪ್ರಾಯ ಏನು ಹೇಳು..? " ಪ್ರಶ್ನೆ ಎಸೆದು ಅವಳುತ್ತರಕ್ಕಾಗಿ ಕಾದು ಕುಳಿತ Dr. ಋತ್ವಿಕ್
" ನಂಬಿಕೆ ಇದೆ. ಆದರೆ ಮೂಢ ನಂಬಿಕೆ ಇಲ್ಲ. ಯಾವುದೇ ಆಚರಣೆಗಳ ಹಿಂದಿನ ಅರ್ಥ ತಿಳಿದು ಅದನ್ನು ಪಾಲಿಸುವುದು ಅರ್ಥಪೂರ್ಣ. ಮಹತ್ತರ ಉದ್ದೇಶ ಇರುವಂತ ಆಚರಣೆಗಳನ್ನ ಮಾತ್ರ ನಾನು ಗೌರವಿಸಿ ಆಧರಿಸುತ್ತೇನೆ. ಇನ್ನೂ ಮಥ ಮತ್ತು ಧರ್ಮದ ವಿಚಾರಕ್ಕೆ ಬಂದರೆ, ಜಗತ್ತಿನಲ್ಲಿ ಮತ ಅಥವಾ ಜಾತಿಗಳು ಅನೇಕವಿರಬಹುದ. ಆದರೆ ಧರ್ಮ ಒಂದೇ ಎಂದು ನಂಬಿದ್ದೇನೆ. ಧರ್ಮನೀತಿಗಳನ್ನು ದೇವರು ಮಾಡಿದ್ದೋ ಅಥವಾ ಮನುಷ್ಯ ಸೃಷ್ಟಿಸಿಕೊಂಡಿದ್ದೋ ಎನ್ನುವ ಜಿಜ್ಞಾಸೆ ನನಗೆ ಬೇಡ. ನನ್ನ ಪ್ರಕಾರ, ಯಾವುದು ಸಕಲ ಸೃಷ್ಟಿಯ ಹಿತ ಕಾಯುವುದೋ ಅದೇ ಧರ್ಮ. ಮತ್ತು ಯಾವುದು ಯಾರ ಹಾನಿಗೆ ಕಾರಣವಾಗುವುದೋ ಅದೇ ಅಧರ್ಮ.. "
" ಹಾಗಿದ್ದರೆ ನಮಗೆ ಈ ಶಾಸ್ತ್ರಗಳ ಅವಶ್ಯಕತೆ ಯಾಕಿದೆ ? ಕುಲ ಜಾತಿಗಳ ಹೊಡೆದಾಟದ ಮದ್ಯೆ ಸಂತರುಗಳ ಹೆಸರು ತಂದು ಸಮಾಜದಲ್ಲಿ ಎಷ್ಟು ಗೊಂದಲಗಳು ಎದ್ದಿವೆ. ಅವು ಅನೇಕ ಅನರ್ಥಗಳಿಗೆ ಕಾರಣವಾಗಿರೋದು ನಿನಗೂ ಗೊತ್ತು. ಇದಕ್ಕೇನು ಹೇಳುವೆ? "
" ಜ್ಞಾನದ ಬಲದಿಂದ ಅಜ್ಞಾನನದ ಕೇಡು ನೋಡಯ್ಯ ಎಂದು ಇದಕ್ಕೆ ಹೇಳುವುದೇನೋ ನೋಡು. ಶಾಸ್ತ್ರ ಸಂಪ್ರದಾಯ ಆಚರಣೆಗಳೆಲ್ಲ ನಾವು ಮರೆತ ನಮ್ಮ ಮೂಲ ನೆಲೆಗೆ ಮತ್ತೆ ಸಾಗಲು ನೆನಪಿಸಿ ನಡುವೆ ಸಹಾಯ ಮಾಡುವ ಸೇತುವೆಗಳು ಎಂಬುದು ನನ್ನ ನಂಬಿಕೆ. ಸಮಾಜದ ಅನೇಕ ಅರ್ಥಹೀನ ಕಟ್ಟುಪಾಡುಗಳನ್ನು ಧಿಕ್ಕರಿಸಿ, ಜಾತಿಮತಗಳ ತೊರೆದು ಮಾನವತೆಯ ಸತ್ವವನ್ನು ಜಗತ್ತಿಗೆ ಸಾರಿದ ಸಾಧು ಸಂತರುಗಳನ್ನು ಕುಲಜಾತಿಗಳಿಗೆ ಸೀಮಿತಗೊಳಿಸಿ ಹೊಡೆದಾಡುತ್ತಿರುವುದು ನಮ್ಮ ಅಜ್ಞಾನ. 'ಎಷ್ಟು ಮತಗಳೋ ಅಷ್ಟು ಪಥಗಳು' ಎಂದು ಶ್ರೀ ರಾಮಕೃಷ್ಣ ಪರಮಹಂಸರು ಹೇಳಿರುವುದು ಇದಕ್ಕೆ. ಜಾತಿ/ಮತಗಳು/ ಜೀವಗಳು ಯಾವುದೇ ಇರಲಿ, ಕೊನೆಯಲ್ಲಿ ಎಲ್ಲವು ಒಂದೇ ಮೂಲ ನೆಲೆಯಲ್ಲಿ ಲೀನವಾಗುತ್ತದೆ ಎಂದರ್ಥ ಅಲ್ಲವೇ..?! " ಎಂದು ಹೇಳಿ ಮಾತು ಮುಗಿಸಿದಾಗ, ಕೇಳುತ್ತಿದ್ದವನು ಅವಳೆಡೆಗೊಂದು ಮೆಚ್ಚುಗೆ ಅಭಿಮಾನದ ನೋಟ ಹರಿಸಿದ್ದ.
ಅವನ ನೋಟ ಅರ್ಥೈಸಿಕೊಂಡವಳಂತೆ "ಪ್ರತಿಯೊಬ್ಬರ ನಿಲುವುಗಳು, ನಂಬಿಕೆಗಳು ವಿಭಿನ್ನ. ಅವರವರ ನಂಬಿಕೆಗಳು ಅವರವರಿಗೆ ಚೆನ್ನ. ಇಲ್ಲಿ ನಾನು ಹೇಳಿದ್ದು ನನ್ನ ಅಭಿಪ್ರಾಯವನ್ನ ಮಾತ್ರ. ನಿನ್ನನ್ನು ಮೆಚ್ಚಿಸುವ ಅವಶ್ಯಕತೆ ನನಗಿಲ್ಲ " ಎಂದು ಮುಖ ತಿರುಗಿಸಿ ಕೂತಳು Dr. ಋಗ್ವಿ
" ಮತ್ಯಾರನ್ನು ಮೆಚ್ಚಿಸೋಕಿದೆ ನೀನು? " ಮತ್ತೆ ಕೆಣಕಿದ್ದ ಅವನು.
" ಮೇಲಿನವನನ್ನು " ಕೈ ತೋರಿದ್ದಳು ಅವಳು.
" ಆ ಮೇಲಿನವನೇ ನಿನಗಾಗಿ ಕಳಿಸಿರುವುದು ನನ್ನನ್ನು" ಎಂದವನ ಮಾತಿಗೆ,
ಅವಳ ಹುಬ್ಬುಗಳು ಗಂಟಿಕ್ಕಿದವು. "ಮತ್ತೇನು ನಿನ್ನ ರಗಳೆ? " ಎಂಬಂತೆ.
" ಸರಾಗವಾಗಿ ಸಾಗುತ್ತಿದ್ದ ನನ್ನ ಬದುಕಲ್ಲಿ ಸುಂಟರಗಾಳಿಯಂತೆ ಬಂದವಳು ನೀನು.. " ಎಂದವನ ಮಾತಿಗೆ ಇಬ್ಬರ ಮೊದಲ ಭೇಟಿ ನೆನಪಾಗಿ ಸುಮ್ಮನೆ ನಕ್ಕಳು ವನದೇವಿಯಂತೆ. ಅವಳ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ ಕಳೆದೋದನವ ಪ್ರಕೃತಿ ಪುರುಷನಂತೆ...
ಅಂದು ಭರಪೂರ ಬಿಟ್ಟು ಬಿಡದೆ ಸುರಿವ ಮಳೆಯಲ್ಲಿ, ಎಮರ್ಜೆನ್ಸಿ ಕೇಸ್ ಒಂದು ಬಂತೆಂಬ ಕಾರಣಕ್ಕೆ ಅವಸರದಲ್ಲಿ ಬರುತ್ತಿದ್ದವಳಿಗೆ, ತಾನೂ ಗಡಿಬಿಡಿಯಲ್ಲಿ ಹೊರಟವನು ಎದುರು ತಾಗಿ ಅವಳ ಕೈಲಿದ್ದ ಕೊಡೆ ಬಿದ್ದು ಹೋಗಿತ್ತು. ಇಬ್ಬರ ಮೇಲೂ ಜಡಿ ಮಳೆಯ ಅಭಿಷೇಕವಾಗಿತ್ತು. ಸಿಟ್ಟಲ್ಲಿ ಎದುರಿದ್ದವನು ಪರಿಚಯವೇ ಇಲ್ಲದಿದ್ದರೂ ವಾಗ್ ಪ್ರಹಾರ ನಡೆಸಿದ್ದಳು. ಮರು ಉತ್ತರ ಅವನು ನೀಡುವುದರೊಳಗೆ ಅಲ್ಲಿಂದ ಹೋಗಿದ್ದಳು. ಹೀಗೆ ಆರಂಭವಾದ ಭೇಟಿಯೊಂದು ಅದ್ಯಾವಾಗ ಬಂಧವಾಯಿತೋ ಇಬ್ಬರಿಗೂ ಅರಿವಾಗದ ಸಂಗತಿ.
ಮತ್ತೆ ಅವನೇ ಮಾತು ಮುಂದುವರೆಸಿದ. " ಅಂದು ಆ ಸುಂಟರಗಾಳಿಯಿಂದ ಅಲ್ಲೋಲಕಲ್ಲೋಲವಾದ ಈ ನೇತ್ರ ತಜ್ಞನ ಹೃದಯದ ಬೀದಿ ಇಂದಿಗೂ ಸ್ವಸ್ಥವಾಗದೆ ಅಸ್ತವ್ಯಸ್ತ..." ಮೆಲ್ಲನೆ ಉಸುರಿದನವ.
ಹುಡುಗನ ಮಾತಿನ ಹರಿವಿನ ದಿಕ್ಕು ಅರಿವಾದ ಹುಡುಗಿಗೆ, ಅವನನ್ನು ಕೀಟಲೆ ಮಾಡಿ ಕಾಡಿಸುವ ಮನಸಾಗಿ, ತಾನು ಮಾತು ಶುರು ಮಾಡಿದಳು.
" ನನ್ನ ವಿಭಾಗದ ಪ್ರಕಾರ, ಎಲ್ಲಾ ಭಾವನೆಗಳು ಹುಟ್ಟುವುದು ಮೆದುಳಿನ ಒಂದು ಮೂಲೆಯಿಂದ. ನಿನ್ನ ಹೃದಯವು ಮೆದುಳಿನಲ್ಲೇ ಇದೆಯಾ ? " ಎಂದಳು.
" ನೀನು neurologist ಎನ್ನುವುದನ್ನು prove ಮಾಡಲು ಬರಬೇಡ. ನನಗದು ಗೊತ್ತಿರುವ ಸಂಗತಿ. ನನ್ನೊಳಗೆ ನಿನ್ನೆಡೆಗೆ ಹುಟ್ಟಿರುವ ಎಲ್ಲ ಭಾವನೆಗಳ ವಿವರಿಸುವ ಬದಲು ನನ್ನ ಮೆದುಳು ಕಿತ್ತು ನಿನ್ನ ಕೈಗಿಡುವೆ. ನೀನೇ ಸಂಶೋಧಿಸಿಕೋ. ಆಗಬಹುದ..? " ಎಂದವನ ಮಾತಿಗೆ ನಗು ತಡೆಯದಾದಳು.
ತನ್ನವಳ ನಗುವಿನೊಳಗೆ ತಾನೂ ಬೆರೆತುಹೋದನವ...ಎದುರು ಕೂತ ಪ್ರಕೃತಿಯೆ ನಾಚುವಂತೆ...
" ಬಿರುಗಾಳಿಯಾಗಿಯೋ, ಅಥವಾ ಮಂದಾನಿಲವಾಗಿಯೋ, ಈ ಜೀವ ಉಸಿರಾಡಲು ಜೀವನಪೂರಾ ಜೀವಂತಿಕೆ ತುಂಬುಲು ನನ್ನ ಜೀವನದೊಳಗೆ ಸದಾ ನೀನಿರಲೇಬೇಕು.. " ಅವಳೊಪ್ಪಿಗಾಗಿ ಕಾದು ಕುಳಿತ.
" ನಾ ಬಿಸಿಲಂತೆ ಉರಿದರು,
ಮಳೆಯಂತೆ ಸುರಿದರು,..ಈ ಪ್ರಕೃತಿಯ ವೈಪರೀತ್ಯ ಅನವರತ ಸಹಿಸುವ ಪುರುಷ ನೀನಾಗಿರಬೇಕು...ಎನ್ನ ಉಸಿರಿರುವರೆಗೂ ಈ ಶಿಕ್ಷೆಗೆ ಬದ್ದನಾಗಿರಬೇಕು.." ಎಂದವಳ ಮನದೊಳಗೆ ಅಗಾಧ ಪ್ರೇಮಚಿಲುಮೆ. ಏಕತಾನತೆಯ ಭಾವಕೆ ಸಾಕ್ಷಿಯಾಯಿತು ಅವರೀರ್ವರ ಒಲುಮೆ.
_ಪಲ್ಲವಿ ಚೆನ್ನಬಸಪ್ಪ ✍️