ಕರ್ಣಾಟಕ ಬ್ಯಾಂಕ್ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ (30.06.2023) ರೂ. 370.70 ಕೋಟಿಗಳ ನಿವ್ವಳ ಲಾಭವನ್ನು ಘೋಷಿಸಿದೆ. ಬ್ಯಾಂಕ್ ಕಳೆದ ವರ್ಷದ ಮೊದಲ ತ್ರೈಮಾಸಿಕಾಂತ್ಯಕ್ಕೆ ಅಂದರೆ 30.06.2022 ರಲ್ಲಿ ರೂ. 114.18 ಕೋಟಿಗಳ ಲಾಭವನ್ನು ದಾಖಲಿಸಿತ್ತು. ಇದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಶೇ 224.66 ರ ಬೆಳವಣಿಗೆಯನ್ನು ಸಾಧಿಸಿದಂತಾಗಿದೆ.
ಇಂದು ಮಂಗಳೂರಿನ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸಂಪನ್ನಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ ವಿತ್ತೀಯ ವರ್ಷ2023-24ರ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.
ಬ್ಯಾಂಕಿನ ನಿರ್ವಹಣಾ ಲಾಭವು 30.06.2023ರ ಅಂತ್ಯಕ್ಕೆ ರೂ. 601.17 ಕೋಟಿಗಳಿಗೆ ಹಾಗೂ ನಿವ್ವಳ ಬಡ್ಡಿ ಆದಾಯವುರೂ. 814.68 ಕೋಟಿಗಳಿಗೆ ತಲುಪಿದೆ.
ಬ್ಯಾಂಕಿನ ಒಟ್ಟು ವ್ಯವಹಾರವು 30.06.2023ರ ಅಂತ್ಯಕ್ಕೆ ಶೇ 6.85ರ ವೃದ್ಧಿಯೊಂದಿಗೆ ರೂ. 1,48,449.27 ಕೋಟಿಗಳನ್ನು ತಲುಪಿದ್ದು, ಇದು 30.06.2022 ರಲ್ಲಿ ರೂ.1,38,936.17 ಕೋಟಿಗಳಷ್ಟಿತ್ತು. 30.06.2023ರ ಅಂತ್ಯಕ್ಕೆ ಠೇವಣಿಗಳ ಮೊತ್ತವು ಶೇ.7.92ರ ವೃದ್ಧಿಯೊಂದಿಗೆ ರೂ. 86,959.86 ಕೋಟಿಗಳಿಗೆ ಹಾಗೂ ಮುಂಗಡಗಳು ಶೇ 5.36ರ ವೃದ್ಧಿಯೊಂದಿಗೆ ರೂ. 61,489.41 ಕೋಟಿಗಳಿಗೆ ಏರಿವೆ.
ಬ್ಯಾಂಕಿನ ಅನುತ್ಪಾದಕ ಆಸ್ತಿಗಳಲ್ಲಿ ಸಾಕಷ್ಟು ಚೇತರಿಕೆ ಕಂಡಿದ್ದು, ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕಾಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು (GNPA) ಶೇ. 3.68ಕ್ಕೆ ಇಳಿಕೆ ಕಂಡಿದ್ದು, ಅದು 30.06.2022ರಲ್ಲಿ ಶೇ 4.03ರಷ್ಟಿತ್ತು. ಅದರಂತೆಯೇ ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು (NNPA) ಶೇ1.43ಕ್ಕೆ ಇಳಿಕೆಯಾಗಿದ್ದು, 30.06.2022ರಲ್ಲಿ ಶೇ 2.16ರಷ್ಟಿತ್ತು.
ಗ್ರಾಹಕ ಸ್ನೇಹಿ ಕರ್ಣಾಟಕ ಬ್ಯಾಂಕಿನಲ್ಲಿ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ 1.72 ಲಕ್ಷ ಗ್ರಾಹಕರು ಹೊಸ ಖಾತೆಗಳನ್ನು ತೆರೆಯುವುದರ ಮೂಲಕ ಕೆಬಿಎಲ್ ಪರಿವಾರಕ್ಕೆ ಸೇರ್ಪಡೆಯಾಗಿದ್ದಾರೆ. ಅದಲ್ಲದೆ ಬ್ಯಾಂಕ್ ಈ ತ್ರೈಮಾಸಿಕದಲ್ಲಿ ಮ್ಯೂಚ್ಯುವಲ್ ಫಂಡ್‍ಗಳು ಹಾಗೂ ಸಹಭಾಗಿತ್ವದ ಕ್ರೆಡಿಟ್ ಕಾರ್ಡುಗಳು, ಮುಂಗಡಗಳ ವಿಸ್ತರಣೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ.
30.06.2022 ರಲ್ಲಿ ಶೇ.15.51ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತವು (ಕ್ಯಾಪಿಟಲ್ ಅಡೆಕ್ವೆಸಿ ರೇಶ್ಯೋ) ಈ ತ್ರೈಮಾಸಿಕದ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ 17.00ಕ್ಕೆ ತಲುಪಿದೆ.
ಬ್ಯಾಂಕಿನ ಪ್ರಾವಿಶನ್ ಕವರೇಜ್ ರೇಶಿಯೋ (PCR) ಶೇ 83.47ಕ್ಕೆ ತಲುಪಿ ಹೊಸ ಎತ್ತರವನ್ನು ಕಂಡಿದೆ. ಇದು 30.06.2022ರಲ್ಲಿ ಶೇ76.77ರಷ್ಟಿತ್ತು.
ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಓ ಶ್ರಿಕೃಷ್ಣನ್ ಹೆಚ್ "ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶ ಸಂತಸ ತಂದಿದೆ. ಸುದೃಢವಾದ ಮೂಲಭೂತ ಅಂಶಗಳ ಭದ್ರ ಬುನಾದಿಯಲ್ಲಿರುವ ಕರ್ಣಾಟಕ ಬ್ಯಾಂಕ್, ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಪ್ರಗತಿಯ ಪಥದಲ್ಲಿ ದೃಢವಾದ ಹೆಜ್ಜೆಯನ್ನುಇಡುತ್ತಿದೆ. ಅನೇಕ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಬ್ಯಾಂಕ್ ವಿಶೇಷ ಗಮನ ಹರಿಸುತ್ತಿದೆ. ಆ ಮೂಲಕ ನೂತನ ಡಿಜಿಟಲ್ ಪ್ರಾಡಕ್ಟ್ ಗಳನ್ನು ಗ್ರಾಹಕರಿಗೆ ಪರಿಚಯಿಸುವಲ್ಲಿ ಸಿಬ್ಬಂದಿಗಳೂ ಸಜ್ಜಾಗುತ್ತಿದ್ದಾರೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್‍ಎಂಇ), ಚಿಲ್ಲರೆ (ರಿಟೇಲ್) ಹಾಗೂ ಕೃಷಿ ಆಧಾರಿತ ಮುಂಗಡಗಳ ಮೇಲೆ ವಿಶೇಷ ಗಮನ ಹರಿಸಿ ಅವುಗಳ ವಿಸ್ತರಣೆಯಲ್ಲಿ ಕಾರ್ಯಪ್ರವೃತ್ತರಾಗುತ್ತಲಿದ್ದೇವೆ. ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗುವಂತೆ ಹೊಸ ಯುಗದ ಫಿನ್‍ಟೆಕ್ ಕಂಪೆನಿಗಳ ಸಹಭಾಗಿತ್ವದೊಂದಿಗೆ ಎರಡನೆಯ ಶತಮಾನದತ್ತ ಬ್ಯಾಂಕ್ ದಾಪುಗಾಲು ಹಾಕಲಿದೆ”ಎಂದು ನುಡಿದರು.