ಮಂಗಳೂರು: ಡಾ ಸುರೇಶ ನೆಗಳಗುಳಿ ಇವರ ತುಷಾರ ಮಾಸಪತ್ರಿಕೆಯಲ್ಲಿ ಬಹುಮಾನಿತ ಹಾಗೂ ಮೆಚ್ಚುಗೆ ಪಡೆದ ಕವನಗಳ ಸಂಕಲನ "ತುಷಾರ ಬಿಂದು" ಪರಿಷ್ಕೃತ ಕೃತಿಯನ್ನು ಸಂದೇಶ ಪ್ರತಿಷ್ಠಾನದಲ್ಲಿ ನಡೆದ ಕಥಾ ಬಿಂದು ಪ್ರಕಾಶನದ ವಾರ್ಷಿಕೋತ್ಸವದ ಸಂದರ್ಭ ಸನ್ಮಾನ್ಯ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇವರಿಂದ ವಿದ್ಯುಕ್ತವಾಗಿ ಲೋಕಾರ್ಪಣೆ ಗೊಂಡಿತು.
ಮೂಡಬಿದಿರೆಯ ಧನಲಕ್ಷ್ಮೀ ಕ್ಯಾಶ್ಯೂ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಪತಿ ಭಟ್ ಇವರು ಮುಖ್ಯ ಅತಿಥಿಗಳಾಗಿದ್ದ ಈ ಸಮಾರಂಭವು ಕಥಾಬಿಂದು ಪ್ರಕಾಶನದ ಮುಖ್ಯಸ್ಥರಾದ ಪಿ.ವಿ ಪ್ರದೀಪ್ ಕುಮಾರ್ ಇವರ ಮುಂದಾಳ್ತನದಲ್ಲಿ ಸಂಪನ್ನ ಗೊಂಡಿತು.
ಸಂಕಲನವನ್ನು ಲೋಕಾರ್ಪಣೆ ಮಾಡಿದ ಪ್ರದೀಪ ಕುಮಾರ ಕಲ್ಕೂರ ಅವರು ಮಾತನಾಡುತ್ತಾ ವೈದ್ಯರಾದರೂ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ ಲೇಖಕರ ಕೈಂಕರ್ಯವನ್ನು ಶ್ಲಾಘಿಸಿದರು.
ಶ್ರೀಪತಿ ಭಟ್ ಮಾತನಾಡುತ್ತಾ ಜನಾನುರಾಗಿ ಸರಳ ವ್ಯಕ್ತಿತ್ವದ ಡಾ ಸುರೇಶ ನೆಗಳಗುಳಿ ಅವರೊಡನೆ ತಮಗಿರುವ ಸುದೀರ್ಘ ಕಾಲದ ಸಂಬಂಧವನ್ನು ಜ್ಞಾಪಿಸಿಕೊಳ್ಳುತ್ತಾ ತುಷಾರ ಮಾಸಪತ್ರಿಕೆಯಲ್ಲಿ ಇಷ್ಟೊಂದು ಚಿತ್ರಕವನಗಳು ಬಹುಮಾನಿತವಾದ ಹಾಗೂ ಅವುಗಳನ್ನು ಒಟ್ಟು ಮಾಡಿ ಸಾಹಿತ್ಯ ಪ್ರಿಯರಿಗೆ ಉಣ ಬಡಿಸುವ ಕಾರ್ಯವನ್ನು ಮನಸಾ ಪ್ರಶಂಸೆ ಮಾಡಿದರು.
ಅಧ್ಯಕ್ಷ ಸ್ಥಾನದಿಂದ ಶುಭದೊಸಗೆ ನೀಡುತ್ತಾ ಮಾನ್ಯ ಹರಿಕೃಷ್ಣ ಪುನರೂರು ಅವರು ವೈದ್ಯನಾದವನ ಕೈಯಲ್ಲಿ ಲೇಖನಿ ಓಡಿದ ಪರಿಗೆ ಸಂತಸ ವ್ಯಕ್ತ ಪಡಿಸಿದರು ಹಾಗೂ ಎಲ್ಲರೂ ಪುಸ್ತಕಗಳನ್ನು ಕೊಂಡು ಕೊಂಡಾಡ ಬೇಕು. ಅದೇ ಲೇಖಕನಾದವನಿಗೆ ನೀಡುವ ಅತ್ಯಮೂಲ್ಯ ಪ್ರೋತ್ಸಾಹ ಎಂದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ಪ್ರಾನ್ಸಿಸ್ ಆಸಿಸಿ ಅಲ್ಮೆಡಾ ರವರು ಮುಖ್ಯ ಅತಿಥಿಗಳಲ್ಲೊಬ್ಬರಾಗಿದ್ದು ಸಾಹಿತ್ಯ ಸೇವೆಗೆ ಮಿಗಿಲಾದ ಸೇವೆ ಬೇರಿಲ್ಲ, ಹಾಗೂ ತನ್ನ ವೇದಿಕೆಯು ಇಂತಹ ಸಮಾರಂಭಗಳಿಗೆ ಸದಾ ವೇದಿಕೆ ಕಲ್ಪಿಸಿ ಕೊಡುತ್ತದೆ ಎಂದು ಶುಭ ನುಡಿದರು.
ತನ್ನ ಕವನ ಸಂಕಲನ ಲೋಕಾರ್ಪಣೆಗೊಂಡ ಸಂತಸವನ್ನು ಹಂಚಿಕೊಳ್ಳುತ್ತಾ ವೈದ್ಯ ಸಾಹಿತಿ ಡಾ ಸುರೇಶ ನೆಗಳಗುಳಿ ಇವರು ಅತ್ಯಂತ ಹೆಚ್ಚಿನ ಸಂಖ್ಯೆಯ ತನ್ನ ಕವನಗಳು ತುಷಾರ ಚಿತ್ರಕವನ ಸ್ಪರ್ಧೆಯಲ್ಲಿ ಬಹುಮಾನಿತವಾಗಿದ್ದ ಹಾಗೂ ಬಹು ಸಂಖ್ಯೆಯ ಕವನಗಳು ಮೆಚ್ಚುಗೆಗೆ ಪಾತ್ರವಾಗಿದ್ದು ಅವುಗಳಲ್ಲಿ ಲಭ್ಯವಿದ್ದ ಕವನಗಳನ್ನು ಒಟ್ಟಾಗಿಸಿ ಜನಮನಕ್ಕೆ ತಲುಪಿಸುವ ಈ ಪುಟ್ಟ ಪ್ರಯತ್ನಕ್ಕೆ ಸರ್ವರ ಸಹಕಾರ ಕೋರಿದರು. ಈ ಸಂಕಲನದಲ್ಲಿ ಅಂದಿನ ತುಷಾರ ಸಂಪಾದಕರ ಮುನ್ನುಡಿಗಳಿರುವುದು ಹರ್ಷ ತಂದಿದೆ.ಹಾಗೂ ಮಣಿಪಾಲದ ತುಷಾರ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ ಮತ್ತು ತುಷಾರ ಬಳಗ ತನಗೆ ಇತ್ತ ಮನ್ನಣೆಗೆ ಹರ್ಷವಿದೆ ಎಂದರು ಅಲ್ಲದೆ.ಅಂದವಾದ ಬೆನ್ನುಡಿ ಬರೆದ ಹುಬ್ಬಳ್ಳಿಯ ಡಾ ಗೋವಿಂದ ಹೆಗಡೆಯವರನ್ನೂ ಮನಸಾ ಸ್ಮರಿಸಿದರು.
ಶಾಂತಾ ಕುಂಟಿನಿ ಸತ್ಯ ಶಾಂತ ಪ್ರತಿಷ್ಠಾನ ಪುತ್ತೂರು ಇವರ ಪ್ರಾರ್ಥನೆ, ಸುಧಾ ನಾಗೇಶ್ ರವರ ನಿರೂಪಣೆ , ಪಿ.ವಿ ಪ್ರದೀಪ್ ಕುಮಾರ್ ರವರ ಸ್ವಾಗತ ಹಾಗೂ ನಟ ಸಾಹಿತಿ ಕಾಸರಗೋಡು ಅಶೋಕ ಕುಮಾರ್ ಇವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.
ಹರಿಶ್ಚಂದ್ರ ಸಾಲಿಯಾನ್ ಮುಲ್ಕಿ, ಶೇಖರ ಅಜೆಕಾರು, ರಜನಿ ಜೀರಿಗ್ಯಾಳ್, ಪಿಂಗಾರ ಪತ್ರಿಕೆಯ ರೇಮಂಡ್ ಡಿ ಕುನ್ಹಾ ತಾಕೊಡೆ , ಬೆಟ್ಟಂಪಾಡಿ ಸುಂದರ್ ಶೆಟ್ಟಿ, ಜಿಕೆ ಮಾಧವ ರಾವ್ ಮತ್ತು ಜೆಸಿಐ ಪ್ರಕಾಶ್ ದತ್ ವೇದಿಕೆಯಲ್ಲಿದ್ದರು.
ವರದಿ :- ಡಾ ಸುರೇಶ ನೆಗಳಗುಳಿ