ಉಜಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,200 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಒಂದು ಕೋಟಿ ಎಪ್ಪತ್ತೆಂಟು ಲಕ್ಷದ ಐವತ್ತು ಸಾವಿರ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಬೆಂಚು ಮತ್ತು ಡೆಸ್ಕ್ ಗಳನ್ನು ವಿತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ ಹೊಸಪೇಟೆ ಜಿಲ್ಲೆಗಳ 287 ಶಾಲೆಗಳಿಗೆ 255೦ ಬೆಂಚು ಮತ್ತು ಡೆಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು.

ಕಳೆದ ಹತ್ತು ವರ್ಷಗಳಲ್ಲಿ 29 ಜಿಲ್ಲೆಗಳ 9213 ಶಾಲೆಗಳಿಗೆ 58915 ಜೊತೆ ಬೆಂಚು, ಡೆಸ್ಕ್ ಗಳನ್ನು ವಿತರಿಸಲಾಗಿದ್ದು ಇದಕ್ಕಾಗಿ ಹದಿನೈದು ಕೋಟಿ ತೊಂಬತ್ತೆರಡು ಲಕ್ಷದ ಇಪ್ಪತ್ತಾರು ಸಾವಿರ ರೂಪಾಯಿ ವಿನಿಯೋಗಿಸಲಾಗಿದೆ ಎಂದರು. ಈ ಯೋಜನೆ ನಿರಂತರವಾಗಿ ನಡೆಯಲಿದೆ ಎಂದವರು ತಿಳಿಸಿದರು.

ಹೇಮಾವತಿ ವೀ. ಹೆಗ್ಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯೋಜನಾಧಿಕಾರಿ ಪುಷ್ಪರಾಜ್, ಸಿರಿ ಘಟಕದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಉಪಸ್ಥಿತರಿದ್ದರು.