ಮಂಗಳೂರು, ಅ. 6: ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ಮೂಲಕ ಚಾರಿತ್ರಿಕ ಮಹತ್ವವನ್ನು ದಾಖಲಿಸಿ ದೇಶ ವಿದೇಶಗಳಲ್ಲಿ ಪಸರಿಸಿದೆ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ್ ಮಲ್ಯ ತಿಳಿಸಿದ್ದಾರೆ.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಸವಿ ನೆನಪಿಗಾಗಿ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಅಂಚೆ ಇಲಾಖೆ ವಿವಿಧ ಸೌಲಭ್ಯಗಳನ್ನು ಸಾರ್ವಜನಿಕರಿಗೆ  ನೀಡುವ ಮೂಲಕ ಜನರಿಗೆ ಅಪಘಾತ ವಿಮಾಯೋಜನೆ, ಆರೋಗ್ಯ ಸುರಕ್ಷಾ ವಿಮಾಯೋಜನೆಯ ಜೊತೆ ಅಂಚೆ ಸೇವೆಯಲ್ಲಿಯೂ ಸುಧಾರಿತ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಮೈ ಸ್ಟ್ಯಾಂಪ್ ಮೂಲಕ ಚಾರಿತ್ರಿಕ ಮಹತ್ವದ ಘಟನೆಗಳ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಅಂಚೆ ಚೀಟಿ ಬಿಡುಗಡೆ ಮಾಡಲು ಅವಕಾಶ ನೀಡಿದೆ ಎಂದು ಸುಧಾಕರ್ ಮಲ್ಯ ತಿಳಿಸಿದ್ದಾರೆ.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ ,ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಆರ್. ರಾಮಕೃಷ್ಣ , ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು.