ಮಂಗಳೂರು: ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾರು ಚರ್ಚೆ ನಡೆಸದೆ ಕಾನೂನು ತರುವುದನ್ನು ನಿಲ್ಲಿಸಬೇಕು, ವಿವಾದಿತ ಕೃಷಿ ಕಾನೂನು ಹಿಂಪಡೆಯಬೇಕು, ಪ್ರಧಾನಿ ಮೋದಿ ಕೂಡಲೆ ಪ್ರತಿಭಟನೆ ಮಾಡುತ್ತಿರುವ ರೈತರ ಜೊತೆ ಮಾತನಾಡಬೇಕು ಎಂದು ಮಾಜೀ ಶಾಸಕ ಐವಾನ್ ಡಿಸೋಜಾ ಒತ್ತಾಯಿಸಿದರು.

ನಮ್ಮ ಕಾಂಗ್ರೆಸ್ ಪಕ್ಷವು ದೇಶದ ಎಲ್ಲ ಕಡೆ ಪ್ರತಿಭಟಿಸುತ್ತಿರುವ ರೈತರ ಜೊತೆ ಬಂದ್ ನಲ್ಲಿ ಪಾಲ್ಗೊಂಡಿದೆ. ದೆಹಲಿಯಲ್ಲಿ ಒಂದೂವರೆ ಕೋಟಿ ರೈತರು ಬೀದಿಯಲ್ಲಿ ಇದ್ದಾರೆ. ಮೋದಿ ಸರಕಾರ ಮತ್ತು ಯಡಿಯೂರಪ್ಪ ಸರಕಾರ ಎರಡೂ ದಾರಿ ತಪ್ಪಿದ ತಾಳ ಮೇಳ ತಪ್ಪಿದ ಸರಕಾರಗಳಾಗಿವೆ. ಯಾವುದೇ ಕಾನೂನನ್ನು ಜನರ ಮುಂದೆ ಇಲ್ಲವೇ ಜನ ಪ್ರತಿನಿಧಿ ಸಭೆಗಳಲ್ಲಿ ಚರ್ಚಿಸದೆ ಸುಗ್ರೀವಾಜ್ಞೆಗಳ ಮೂಲಕ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ, ಸಂವಿಧಾನ ಬದ್ಧವಲ್ಲ. ಅಂಥ ಕೃಷಿ ಕಾಯ್ದೆಯಿಂದಾಗಿಯೇ ಇಂದು ದೇಶ ಹೊತ್ತಿ ಉರಿಯುತ್ತಿದೆ ಎಂದು ಐವಾನ್ ಡಿಸೋಜಾ ಹೇಳಿದರು. 

ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಮತ್ತು ಭೂಕಂದಾಯ ಕಾಯ್ದೆಗಳನ್ನು ಹಿಂದಿನ ಬಾಗಿಲಿನಿಂದ ತರಲಾಯಿತು. ಈಗ ದೇಶದ ಏಳಿಗೆಗೆ ಯಾವ ರೀತಿಯಲ್ಲೂ ಸಹಾಯ ಮಾಡದ ಲವ್ ಜಿಹಾದ್ ಮತ್ತು 1964ರಿಂದಲೂ ಇರುವ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ತರುತ್ತೇವೆನ್ನುವ ಈ ಸರಕಾರಕ್ಕೆ ಪ್ರಜಾಪ್ರಭುತ್ವದ ಮೌಲ್ಯವೇ ತಿಳಿದಿಲ್ಲ. ಭಾರತ ಜಗತ್ತಿನ ಅತಿ ದೊಡ್ಡ ಬೀಫ್ ರಫ್ತುದಾರ, ಬಿಜೆಪಿ ಆಡಳಿತದ ‌ಉತ್ತರ‌ ಪ್ರದೇಶದಿಂದಲೇ ಅಧಿಕ ರಫ್ತು ಆಗುತ್ತಿದೆ. ಬಿಜೆಪಿ ಆಳುವ ಗೋವಾದಲ್ಲಿ ಗೋಹತ್ಯೆ ನಿಷೇಧ ಕಾನೂನು ಏಕಿಲ್ಲ? ಒಟ್ಟಾರೆ ಮೋದಿ ಮತ್ತು ಯಡಿಯೂರಪ್ಪ ಸರಕಾರಗಳಿಗೆ ಲಂಗು ಲಗಾಮಿಲ್ಲ, ರೈತರ ಬಗೆಗೆ   ಸ್ವಲ್ಪ ಕೂಡ ಕಾಳಜಿಯಿಲ್ಲ ಎಂದು ಐವಾನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದ್ಮಪ್ರಸಾದ್ ಜೈನ್, ವಿವೇಕ್ ರಾಜ್ ಪೂಜಾರಿ, ಖಾಲಿದ್ ಉಜಿರೆ, ಇಮ್ರಾನ್, ಸಲೀಂ, ಯೂಸುಫ್ ಉಚ್ಚಿಲ್ ಉಪಸ್ಥಿತರಿದ್ದರು.