ಮಂಗಳೂರು, ಮಾ. 5: ದೇಶದ ಐಕ್ಯತೆ ಕಾಪಾಡು ದೃಷ್ಟಿಯಿಂದ ಸಂವಿಧಾನಕ್ಕೆ ಬದ್ಧವಾಗಿರುವುದು ಬ್ಯಾರಿ ಜನಾಂಗದ ಕರ್ತವ್ಯವಾಗಿದೆ ಎಂದು ಕಣಚೂರು ಇಸ್ಲಾಮಿಕ್‍ ಎಜುಕೇಶನ್‍ ಟ್ರಸ್ಟ್ನಅಧ್ಯಕ್ಷ ಡಾ. ಹಾಜಿ ಯು. ಕೆ. ಮೋನು ಅಭಿಪ್ರಾಯಪಟ್ಟರು. 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಬ್ಯಾರಿ ಜನಾಂಗ-ಬ್ಯಾರಿ ಬದುಕು, ಸಂಶೋಧನಾತ್ಮಕ ಅಧ್ಯಯನ ಎಂಬ ವಿಷಯದ ಕುರಿತಾಗಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ತಲೆಮಾರಿಗೆ ಹೋಲಿಕೆ ಮಾಡಿದರೆ ಇಂದಿನ ಯುವಜನಾಂಗ ಬ್ಯಾರಿ ಸಮುದಾಯಕ್ಕೆ ನೀಡುತ್ತಿರುವ ಕೊಡುಗೆ ಶೂನ್ಯದ್ದಾಗಿದೆ. ಅಂದಿನ ತಲೆಮಾರಿಗೆ ಶಿಕ್ಷಣ ಹಾಗೂ ಸಾಹಿತ್ಯದ ಜ್ಞಾನವಿರಲಿಲ್ಲ. ಆದರೆ, ಇಂದು ಕಾಲ ಬದಲಾಗಿದೆ. ಎಲ್ಲರಿಗೂ ಶಿಕ್ಷಣ ದೊರೆಯುತ್ತಿರುವ ಹೊತ್ತಿನಲ್ಲಿ ಸಂಶೋಧನಾತ್ಮಕ ದೃಷ್ಟಿಯಿಂದ ಬ್ಯಾರಿ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಿದೆ ಎಂದರು. 

ಬ್ಯಾರಿ ಚೇಂಬರ್‍ ಆಫ್‍ ಕಾಮರ್ಸ್‍ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ಡಾ. ಹಾಜಿ ಎಸ್. ಎಂ. ರಶೀದ್, ಯುವ ಜನಾಂಗ ಮಾದಕ ವ್ಯಸನ, ಮೊಬೈಲ್ ಬಳಕೆಯಿಂದ ದೂರವಿದ್ದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಸಾಧನೆಯ ಪಥ ಹಿಡಿಯಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್‍ ಅಮೀನ್, ಬ್ಯಾರಿ ಸಮಾಜವು ಎಲ್ಲಾ  ಕ್ಷೇತ್ರಗಳಿಗೂ ಕೊಡುಗೆ ನೀಡುತ್ತಿದೆ. ಸಣ್ಣ ಸಮುದಾಯವಾಗಿದ್ದರೂ, ಬ್ಯಾರಿ ಸಮುದಾಯ ಸಮಾಜದಲ್ಲಿ ಅನನ್ಯತೆ ಹಾಗೂ ಸಾಮರಸ್ಯ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ಧಿಕ್, ಏಮ್ಸ್ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಸಮೀರಾ ಕೆ. ಎ., ಉಡುಪಿ ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಬ್ದುಲ್‍ ರಜಾಕ್, ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿನಿ ಜೈಬುನ್ನಿಸಾ ಅಬ್ದುಲ್‍ ರಜಾಕ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಶಹಲಾ ರಹ್ಮಾನ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಾಜಿ ಕೊಡಿಜಲ್‍ ಇಬ್ರಾಹಿಂ, ಅಹ್ಮದ್ ಬಾವಾ ಮೊಯಿದ್ದೀನ್, ಅಬ್ದುಲ್‍ ರೆಹಮಾನ್‍ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ ಇವರನ್ನು ಸನ್ಮಾನಿಸಲಾಯಿತು.