ಪುತ್ತೂರು:  ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ, ಪಿನ್ಯಾಕಲ್ ಐಟಿ ಕ್ಲಬ್ ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ “ ಆವಿಷ್ಕಾರ, ಉದ್ಯಮಶೀಲತೆ ಮತ್ತು ಸ್ಟಾರ್ಟಪ್ಗಳು” ಎಂಬ ವಿಷಯದ ಕುರಿತು ಒಂದು ಕಾರ್ಯಗಾರವನ್ನು ಕಾಲೇಜಿನ ಸಪಂದನ ಸಭಾಭವನದಲ್ಲಿ ಆಯೋಜಿಸಲಾಯಿತು. ಕಾರ್ಯಗಾರದ ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ   ಕಾಲೇ ಅಧ್ಯಕ್ಷರಾದ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋರವರು “ ಸ್ಟಾರ್ಟಪ್ಗಳು ಉದ್ಯಮವು ಕೇವಲ ವ್ಯವಹಾರವಲ್ಲ ಬದಲಾಗಿ ಸೃಜನಶೀಲತೆಯ ಮೂರ್ತರೂಪವಾಗಿದೆ. ದಾರ್ಶನಿಕ ಮನಸ್ಸುಗಳಲ್ಲಿ ಬದಲಾವಣೆಯ ಕಿಡಿ ಹುಟ್ಟಿದಾಗ ರೂಪುಗೊಳ್ಳುವ ಅದ್ಭುತಗಳೇ  ಸ್ಟಾರ್ಟಪ್ಗಳು. ನಮ್ಮ ಸುತ್ತುಮುತ್ತಲಿನ ಸಣ್ಣ ಪುಟ್ಟ ಸಮಸ್ಯಗಳು ಅಥವಾ ಅವಶ್ಯಕತೆಗಳು ಸ್ಟಾರ್ಟಪ್ಗಳಾಗಿ ಪರಿವರ್ತನೆಗೊಂಡ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದಾಗಿದೆ. ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಉದ್ಯೋಗವನ್ನರಸಿ ಹೋಗುವ ನೂರಾರು ವಿದ್ಯಾರ್ಥಿಗಳ ಪೈಕಿ ಕೇವಲ ನಾಲ್ಕೈದು ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಚಿಂತಿಸಿ ಆ ಚಿಂತನೆಯನ್ನು ಉದ್ಯಮರೂಪದಲ್ಲಿ ತಂದಾಗ ಅದ್ಭುತವನ್ನು ಸೃಷ್ಟಿಮಾಡಬಹುದು.  ನಿಮ್ಮದೇ ಆದ ಹೊಸ ಉದ್ಯಮವನ್ನು ಸ್ಥಾಪಿಸಿ ಸುತ್ತುಮುತ್ತಲಿನ ಹತ್ತಾರು ಮಂದಿಗೆ ಉದ್ಯೋಗನೀಡುವ ರೀತಿಯಲ್ಲಿ ಚಿಂತನೆ ಮಾಡಿರಿ” ಎಂದು ಹೇಳಿದರು. 

ಕಾರ್ಯಗಾರದ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ಬೆಂಗಳೂರಿನ ಸ್ಲ್ಯಾಂಗ್ ಲ್ಯಾಬ್ಸ್ ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಮಧುರಾನಾಥ್ ಆರ್ರವರು “ನಮ್ಮನ್ನು ದಿನನಿತ್ಯ ಕಾಡುತ್ತಿರುವ ಹಳೆಯ ಸಮಸ್ಯೆಗಳಿಗೆ ಹೊಸರೂಪದ ಪರಿಹಾರ ಕಂಡುಕೊಳ್ಳುವುದನ್ನು ಈ ಕಾಲಘಟ್ಟದಲ್ಲಿ ಸ್ಟಾರ್ಟಪ್ ಎನ್ನುತ್ತೇವೆ. ನಮ್ಮ ಆಲೋಚನೆ ಅಥವಾ ಯೋಜನೆಗಳನ್ನು ಉದ್ಯಮ ರೂಪಕ್ಕೆ ತರುವಾಗ ನಾವು ಬಹಳಷ್ಟು ಶ್ರಮಪಡಬೇಕಾಗುತ್ತದೆ. ಸ್ಟಾರ್ಟಪ್ ಕೇವಲ ಓರ್ವ ವ್ಯಕ್ತಿಯ ಯೋಜನೆಯಾಗಿರದೆ ಎರಡು ಅಥವಾ ಮೂರು ಮಂದಿ ಸಮಾನಮನಸ್ಕ ಹಾಗೂ ಬೇರೆ ಬೇರೆ ವಿಷಯಗಳಲ್ಲಿ ಪರಿಣತಿ ಪಡೆದವರ ಸಂಘಟನೆಯಾಗಿದ್ದಲ್ಲಿ ಅದು ಯಶಸ್ವಿಯಾಗುವುದು ನಿಸ್ಸಂಶಯ. ಸ್ಟಾರ್ಟಪ್  ಪ್ರಾರಂಭಿಸುವಾಗ ಆ ವಿಷಯದ ಕುರಿತು ಆಳವಾದ ಜ್ಞಾನ ಹೊಂದಿರಬೇಕು” ಎಂದು ಹೇಳಿದರು. ಅವರು ಕಾರ್ಯಗಾರದುದ್ದಕ್ಕೂ ಸ್ಟಾರ್ಟಪ್ ಅನ್ನು ಪ್ರಾರಂಭಿಸುವ ಬಗೆ ಹೇಗೆ, ಎದುರಾಗುವ ವಿವಿಧ ಸವಾಲುಗಳು, ಅವುಗಳಿಗೆ ನಾವು ಕಂಡುಕೊಳ್ಳಬಹುದಾದ ಪರಿಹಾರಮ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಒಗ್ಗೂಡಿಸುವುದು, ಸರಕಾರದಿಂದ ದೊರೆಯುವ ಆರ್ಥಿಕ ಸಹಾಯ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಉದಾಹರಣೆ ಸಹಿತ ವಿವರಿಸಿದರು. 

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಸ್ವಾಗತಿಸಿದರು. ಐಟಿ ಕ್ಲಬ್ನ ಸಂಯೋಜಕಿ ಸೌಮ್ಯ ವಂದಿಸಿದರು. ಉಪನ್ಯಾಸಕಿ ಗೀತಾ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.