ಕರ್ನಾಟಕ ರಾಜ್ಯ ಬಿಜೆಪಿ ಸರಕಾರವು ರಾಜ್ಯದ ಪಂಚಾಯತ್ ಅಧ್ಯಕ್ಷರು ,ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವ ಧನವನ್ನು ದ್ವಿಗುಣಗೊಳಿಸಿ ಆದೇಶ ನೀಡಿರುವ ಬಗ್ಗೆ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಣೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ಸಂತಸ ವ್ಯಕ್ತಪಡಿಸಿರುತ್ತಾರೆ.

ಪಂಚಾಯತ್ ರಾಜ್ ವ್ಯವಸ್ಥೆಗೆ ಮತ್ತಷ್ಟು ಶಕ್ತಿ ತುಂಬುವ ಸಲುವಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರಕಾರದ ಮಾನ್ಯ ಸಚಿವರಾದ  ಕೋಟ ಶ್ರೀನಿವಾಸ್ ಪೂಜಾರಿಯವರು ವಿಪಕ್ಷದಲ್ಲಿರುವ ಕಾಲದಿಂದಲೂ ಪಂಚಾಯತ್ ಸದಸ್ಯರ ಗೌರವ ಧನದ ವಿಚಾರವಾಗಿ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದೀಗ ಬಿಜೆಪಿ ರಾಜ್ಯ ಸರ್ಕಾರದ ಜೊತೆಗೆ ನಿರಂತರ ಸಮಾಲೋಚನೆ ನಡೆಸಿ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿಯವರು ಈ ಆದೇಶವನ್ನು ಹೊರಡಿಸಿರುತ್ತಾರೆ.

ಈ ಹಿಂದೆ ಪಂಚಾಯತ್ ಅಧ್ಯಕ್ಷರಿಗೆ ರೂಪಾಯಿ ರೂ. 3000/- ಮಾಸಿಕ ಗೌರವ ಧನ ಸಿಗುತ್ತಿದ್ದು ,ಇದೀಗ ರೂಪಾಯಿ 6000/-ಕ್ಕೆ ಏರಿಕೆಯಾಗಿದೆ. 

ಉಪಾಧ್ಯಕ್ಷರ ಗೌರವ ಧನ ರೂಪಾಯಿ 2,000/- ದಿಂದ ದ್ವಿಗುಣಗೊಂಡು ರೂ.4000/- ಆಗಿದೆ. 

ಪಂಚಾಯತ್ ಸದಸ್ಯರಿಗೆ ಈ ಹಿಂದೆ ಸಿಗುತ್ತಿದ್ದ ರೂಪಾಯಿ ಒಂದು ಸಾವಿರ ಮಾಸಿಕ ಗೌರವ ಧನವನ್ನು ರೂಪಾಯಿ 2,000 /-ಕ್ಕೆ ಏರಿಸಲಾಗಿದೆ.

ರಾಜ್ಯದಲ್ಲಿ ಸುಮಾರು 90 ಸಾವಿರಕ್ಕಿಂತಲೂ ಅಧಿಕ  ಸಂಖ್ಯೆಯಲ್ಲಿರುವ ಪಂಚಾಯತ್ ಸದಸ್ಯರು ಗ್ರಾಮೀಣ ಭಾಗದಲ್ಲಿ ಜನರ ಕಷ್ಟ ಸುಖಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ಧು, ಇದೀಗ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸುವಂತಾಗಿದೆ.

ಪಂಚಾಯತ್ ಸದಸ್ಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಬಿಜೆಪಿ ರಾಜ್ಯ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ರಾಜ್ಯದ ಸಮಸ್ತ ಪಂಚಾಯತ್ ಸದಸ್ಯರ ಪರವಾಗಿ ರಾಜ್ಯ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಮರ್ಪಿಸಿರುತ್ತಾರೆ.