ಮಂಗಳೂರು, ಎಪ್ರಿಲ್ 21: ಸರಕಾರ ಕುಸಿದಾಗ ರಾಜ್ಯಪಾಲರು ಸಭೆ ಕರೆಯುತ್ತಾರೆ, ರಾಜ್ಯಪಾಲರು ನಿನ್ನೆ ರಾಜಕೀಯ ಪಕ್ಷಗಳವರ ಸಭೆ ಕರೆದಿರುವುದು ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಸತ್ತಿದೆ ಎಂದು ಅರ್ಥ ಎಂದು ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಕಾಂಗ್ರೆಸ್‌ನ ಹೆಲ್ಫ್‌ಲೈನ್ ಅಡಿಯಲ್ಲಿ ನಮ್ಮ ಆರೋಗ್ಯ ನಮ್ಮ ಹೊಣೆ, ಬ್ರೇಕ್ ದ ಚೈನ್ ಕಾರ್ಯಕ್ರಮದ ಆರಂಭ ಸೂಚಕವಾಗಿ ನಡೆಸಿದ ಪ್ರೆಸ್ ಮೀಟ್‌ನಲ್ಲಿ ಅವರು ಮಾತನಾಡಿದರು. ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಈ ಅಭಿಯಾನ ಆರಂಭಿಸಿದ್ದಾರೆ. ಒಬ್ಬರಿಗೆ ಕೊರೋನಾ ಬಂದರೆ ಸಂಬಂಧಿಕರಿಗೂ ಅದು ಹರಡದಂತೆ ಸರಣಿ ಮುರಿಯಲು ಸೂಕ್ತ ಎಚ್ಚರಿಕೆ ವಹಿಸುವಂತೆ ಮಾಡುವ ಕಾರ್ಯಕ್ರಮವಿದು. ವಿದ್ಯಾರ್ಥಿಗಳು, ಎಲ್ಲ ಬಗೆಯ ವಾಹನ ಚಾಲಕರು, ಅಸಂಘಟಿತ ಕಾರ್ಮಿಕರನ್ನು ಬಳಸಿಕೊಂಡು ಜನ ಸೇರುವ ಎಲ್ಲ ಸ್ಥಳಗಳಲ್ಲಿ ಈ ಪ್ರಚಾರ ಫಲಕ ಅಂಟಿಸುವುದಾಗಿ ಅವರು ಹೇಳಿದರು.
ಮನಪಾ ಪ್ರದೇಶದಲ್ಲಿ ಕೊರೋನಾದಿಂದ ಸತ್ತವರ ಹೆಣ ವಿಲೇವಾರಿಗೆ ರೂ. 8,000 ಪಡೆಯುತ್ತಾರೆ. ಅದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಅವರು ಒಪ್ಪಿದ್ದಾರೆ. ಕೆಲವರು ಹೆಣ ಹೂಳುವ ಪದ್ಧತಿ ಇದೆ. ಅದಕ್ಕೆ ಸೂಕ್ತ ಸ್ಥಳ ಗುರುತಿಸಿಲ್ಲ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಇದಕ್ಕೆ ಪರಿಹಾರ ಕೂಡಲೆ ತರುವ ಆಶ್ವಾಸನೆ ಜಿಲ್ಲಾಧಿಕಾರಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿ ಓಡಾಡುತ್ತಿಲ್ಲ. ಇಲ್ಲಿನ ಶಾಸಕ, ಸಂಸದರು ಕಲ್ಲು ಹಾಕುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಇವರಿಗೆ ಜವಾಬ್ದಾರಿ ಇಲ್ಲವೆ ಎಂದು ಐವಾನ್ ಡಿಸೋಜಾ ಪ್ರಶ್ನಿಸಿದರು.
ಪ್ರಧಾನಿಯವರು ಖಾಸಗಿಯಾಗಿ ಕೋವಿಡ್ ಲಸಿಕೆ ಎಲ್ಲ ಕಡೆ ಸಿಗುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕಾಸು ಕೊಟ್ಟು ಲಸಿಕೆ ತೆಗೆದುಕೊಳ್ಳಲು ಪ್ರಧಾನಿಯವರ ಹೇಳಿಕೆ ಏಕೆ? ಇದನ್ನು ಮೊದಲೇ ಏಕೆ ಮಾಡಲಿಲ್ಲ. ಲಸಿಕೆ ಎಲ್ಲರಿಗೂ ಉಚಿತವಾಗಿ ಸಿಗಬೇಕು. ಸರಕಾರವೇ ಮನೆಮನೆಗೆ ಅದರ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಲಾಕ್‌ಡೌನ್ ಅಂತಿಮ ಎಂದ ಪ್ರಧಾನಿ ಮಾತಿನ ಅರ್ಥವೇನು? ರಾಜ್ಯದಲ್ಲಿ 5 ಜನ ಸೇರಕೂಡದು ಎಂಬ 144 ಸೆಕ್ಷನ್ ಹೇರಿರುವುದು ಏಕೆ? ಪ್ರಧಾನಿ ಆಮದು ಲಸಿಕೆ ಎಂದಿದ್ದಾರೆ. ಇಷ್ಟು ದಿನ ತೆಗೆದುಕೊಂಡುದೇಕೆ? ಖಾಸಗಿಯವರ ಪರವಾಗಿ ಕೆಲಸ ಮಾಡುವ ಈ ಸರಕಾರಗಳಿಗೆ ನಾಚಿಕೆ ಇಲ್ಲವೆ? ರಾಜ್ಯಪಾಲರು ಸಭೆ ಕರೆಯುವ ಸಂವಿಧಾನ ಬಿಕ್ಕಟ್ಟಿನ ಸ್ಥಿತಿ ಈಗೇನಿದೆ? ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿ ದಿನ 1,60,000 ಜನ ಕಳೆದ ಕೊರೋನಾ ಅವಧಿಯಲ್ಲಿ ಜೀವ ಹಿಡಿದಿದ್ದರು. ಕೂಡಲೆ ಇಂದಿರಾ ಕ್ಯಾಂಟೀನ್‌ಗಳ ಸಾಮರ್ಥ್ಯ ಹೆಚ್ಚಿಸಿ, ಕೊರೋನಾ ಎರಡನೇ ಅಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಮಾಡಬೇಕು. ಇಂದಿರಾ ಕ್ಯಾಂಟೀನ್ ವಾರ್ಷಿಕ ಬಜೆಟ್ 200 ಕೋಟಿ ರೂಪಾಯಿ ಮಾತ್ರ. ಅದಕ್ಕೆ ಹಿಂಜರಿಕೆ ಏಕೆ, ಕೂಡಲೆ ಜನರಿಗೆ ಕಿಟ್ ಇತ್ಯಾದಿ ಅನುಕೂಲ ಮಾಡಿಕೊಡಿ ಎಂದು ಐವಾನ್ ಡಿಸೋಜಾ ಕೇಳಿದರು.
ಕೊನೆಯದಾಗಿ ಅವರು ಏಪ್ರಿಲ್ 23ರಂದು ಬೆಳಿಗ್ಗೆ 10ರಿಂದ ಜನಸಾಮಾನ್ಯರಿಗೆ ಲಯನ್ ಸೇವಾ ಮಂದಿರದಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮವನ್ನು ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದೇವೆ. ಅದಕ್ಕೆ ಸಹಕಾರ ಇರಲಿ ಎಂದು ಕೇಳಿಕೊಂಡರು.