ಬೆಳ್ತಂಗಡಿ: ಅಕ್ಟೋಬರ್ 2 ಮಹಾತ್ಮ ಗಾಂಧೀಜಿಯವರ ಜನ್ಮದಿನ. ಪ್ರತಿಯೊಬ್ಬರು ದುಶ್ಚಟವೆಂಬ ಅನಿಷ್ಟ ಅಭ್ಯಾಸಕ್ಕೆ ಬಲಿಬೀಳದೆ ಸಮೃದ್ಧ ಭಾರತವನ್ನು ಕಟ್ಟಬೇಕೆಂದವರು ಗಾಂಧೀಜಿಯವರು. ಇವರ ಈ ಕಲ್ಪನೆಗೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮ ಸ್ವರಾಜ್ಯದ ಕನಸಿನೊಂದಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಯೋಜನೆಗೆ ಹಾಗೂ ಸಮೃದ್ಧ ಕುಟುಂಬಗಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವವರು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು.
ಈ ಬಾರಿ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಯೋಜನಾ ವ್ಯಾಪ್ತಿಯ ಅಕ್ಟೋಬರ್ 2ರ ಗಾಂಧೀಸ್ಮ್ರತಿ ಕಾರ್ಯಕ್ರಮವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಜಾಗೃತಿ ಸೌಧದಲ್ಲಿ ಪೂಜ್ಯಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳು/ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್‍ರವರು‘ಅಕ್ಟೋಬರ್ 2 ಭಾರತದ ಪಾಲಿನ ಮಹತ್ವದ ದಿನ. ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಜನ್ಮ ದಿನ. ಮಹಾತ್ಮಗಾಂಧೀಜಿ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಸದಾ ಶಾಶ್ವತವಾಗಿರುವ ಹೆಸರು, ಇವರೊಂದು ಶಕ್ತಿ, ಬದುಕಿನ ಆದರ್ಶ. ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ದಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸನ್ನುಇಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನನಸು ಮಾಡುವ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆಯ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರೇರಕ ಶಕ್ತಿ’ಎಂದರು. ಇದೇ ಸಂದರ್ಭದಲ್ಲಿ ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್, ಆಡಳಿತ ಯೋಜನಾಧಿಕಾರಿಗಳಾದ ಮಾಧವಗೌಡ, ಕಛೇರಿಯ ಪ್ರಬಂಧಕರು, ಸಹಾಯಕ ಪ್ರಬಂಧಕರು, ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕರು, ನವಜೀವನ ಸಮಿತಿಯ ಸದಸ್ಯರು, ಹಾಗೂ ಜಾಗೃತಿ ಸೌಧ ಕಟ್ಟಡದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
‘ಈ ಬಾರಿ 38 ಜಿಲ್ಲಾಮಟ್ಟದ, 39 ತಾಲೂಕು ಮಟ್ಟದ ಹೀಗೆ ಒಟ್ಟು 77 ಗಾಂಧಿಜಯಂತಿ ಕಾರ್ಯಕ್ರಮಗಳನ್ನು ಅಕ್ಟೋಬರ್ 2ರಿಂದ 18ರ ವರೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಾಂಧೀಸ್ಮ್ರತಿ, ಜನಜಾಗೃತಿ ಜಾಥಾ, ವ್ಯಸನಮುಕ್ತರ ಸಮಾವೇಶ, ಜನಜಾಗೃತಿ ಸಮಾವೇಶ, ಮಾಹಿತಿ ಕಾರ್ಯಕ್ರಮ., ಇತ್ಯಾದಿ ನಡೆಸಲಾಗುತ್ತದೆ. ಹಾಗೆಯೇ ವೇದಿಕೆಯ ಮೂಲಕ 1980ಕ್ಕೂ ಮಿಕ್ಕಿದ ಶಿಬಿರಗಳು ನಡೆದಿದ್ದು, ಶೀಘ್ರವೇ 2000ನೇ ಶಿಬಿರವನ್ನು ರಾಜ್ಯದ 13 ಕಡೆಗಳಲ್ಲಿ ಹಮ್ಮಿಕೊಂಡು ಏಕಕಾಲದಲ್ಲಿ 1000 ಶಿಬಿರಾರ್ಥಿಗಳನ್ನು ಪರಿವರ್ತನೆಗೊಳಿಸುವ ಗುರಿ ಹೊಂದಲಾಗಿದೆ, ಈ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನವನ್ನು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್. ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ್ ಬಾದಾಮಿಯವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ ಎಂದು ವೇದಿಕೆಯ ರಾಜ್ಯ ಕಾರ್ಯದರ್ಶಿಯವರಾದ ವಿವೇಕ್ ವಿ. ಪಾೈಸ್ ತಿಳಿಸಿರುತ್ತಾರೆ.