ಬಂಟ್ವಾಳ: ಅತಿಮಹಾರುದ್ರಯಾಗ ಸಮಿತಿ ವತಿಯಿಂದ ಮೊಗರ್ನಾಡು ಸಾವಿರ ಸೀಮೆ,ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ.2 ರಿಂದ ಮೇ. 4 ರವರಗೆ ಅತಿಮಹಾರುದ್ರಯಾಗ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ತಿಳಿಸಿದ್ದಾರೆ.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಈ ಯಾಗದ ಅಂಗವಾಗಿ ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ಪ್ರಾರಂಭವಾದ ಪಾರಾಯಣ ಎ. 29 ರ ವರೆಗೆ 18158 ಪಾರಾಯಣಗಳು ಪೂರ್ತಿಯಾಗಿದೆ.
ವಾರಣಾಸಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ,ಮಾರ್ಗದರ್ಶನದಲ್ಲಿ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ನಾಡಿನ ಸಮಸ್ತ ಸಂಸ್ಥಾನದಮಠಾದೀಶರುಗಳ ದಿವ್ಯ ಉಪಸ್ಥಿತಿ,ವಿವಿಧ ಪುಣ್ಯ ಕ್ಷೇತ್ರಗಳ ಧರ್ಮಾಧಿಕಾರಿಗಳು ,ಧರ್ಮದರ್ಶಿಗಳು, ಧಾರ್ಮಿಕ ಮುಖಂಡರುಗಳ ಸಹಭಾಗಿತ್ವದಲ್ಲಿ ಸಹಕಾರದಲ್ಲಿ ಲೋಕಲ್ಯಾಣಾರ್ಥವಾಗಿ ಅತಿಮಹಾರುದ್ರಯಾಗ ಸಂಕಲ್ಪದಂತೆ ನಡೆಯಲಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕವಾಗಿಯೇ ಏರ್ಪಡಿಸುತ್ತಿರುವುದು ಯಾಗದ ವಿಶೇಷವಾಗಿದೆ ಎಂದು ಹೇಳಿದರು.
ಮೇ.2 ರಂದು ಶತರುದ್ರಾಭಿಷೇಕ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ.3 ರಂದು ಕ್ಷೇತ್ರಕ್ಕೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಯಾತ್ರೆ ನಡೆಯಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮೇ. 4 ರಂದು ಅತಿಮಹಾರುದ್ರಯಾಗ ನಡೆಯಲಿದ್ದು, ಸಂಜೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಮೂರು ದಿನಗಳಲ್ಲಿ ಸಾವಿರಾರು ಭಕ್ತರು ಯಾಗದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಚಿನ್ ರೈ ಮಾಣಿ, ಅಜಿತ್ ಕುಮಾರ್ ಬರಿಮಾರ್, ಗಣೇಶ್ ಶೆಟ್ಟಿ ಗೋಳ್ತಮಜಲು, ತೋಟ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು. ಕಲ್ಲಡ್ಕದಿಂದ ನೆಟ್ಲ ಕ್ಷೇತ್ರಕ್ಕೆ ವಾಹನ ವ್ಯವಸ್ಥೆ ಮಾಡಲಾಗುವುದು.ಪ್ರತಿದಿನ ಸಹಸ್ರಾರು ಮಂದಿ ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ,ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.