ಮಂಗಳೂರು: ಸೋಜಾ ಕುಟಮ್, ಅತ್ತಾವರ ಹಾಗೂ ಜೆನೆಸಿಸ್ ಪ್ರಕಾಶನ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಕೊಂಕಣಿ ಸಾಹಿತಿ, ಮಾಚ್ಚಾ ಮಿಲಾರ್ , ಅವರು ಕೊಂಕಣಿ ಲೇಖಕರಾಗಿ 50 ವರ್ಷ ಸಂಪೂರ್ಣಗೊಳಿಸಿದ ಪ್ರಯುಕ್ತ ಆಯೋಜಿಸಿದ "ಭಾಂಗರೋತ್ಸವ್ ಸಂಭ್ರಮ್" ಆಚರಣೆಯು ಅವರ ನಿವಾಸದ 'ಮಹಿಮಾ' ಅಂಗಣದಲ್ಲಿ ನಡೆಯಿತು.
ಕೇಕ್ ತುಂಡರಿಸುವ ಮೂಲಕ ಮಾಚ್ಚಾ ಮಿಲಾರ್, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಂಕಣಿ ಸಾಹಿತಿ, ಡೊಲ್ಫಿ ಕಾಸ್ಸಿಯಾರವರು ಬಳಿಕ ಮಾತನಾಡಿ, ಮಾಚ್ಚಾ ಮಿಲಾರ್ ರವರ 1971 ರಿಂದ 2022 ತನಕ ಹಂತ ಹಂತವಾಗಿ ಕೊಂಕಣಿ ಸಾಹಿತ್ಯದಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿ, ಅವರ ಸಂತೋಷದಲ್ಲಿ ಪಾಲುಗೊಂಡು ಅವರ ಸಂಭ್ರಮದ ಉತ್ಸವದಲ್ಲಿ ಭಾಗಿಯಾಗಲು ತುಂಬಾ ಅಭಿಮಾನವಾಗುತ್ತದೆ ಎಂದು ಅಭಿನಂದನೆಯನ್ನು ಸಲ್ಲಿಸಿದರು.
"50 ಬಾಯ್ಬಲ್ ಉಲೊ ಆನಿ ಚುಟುಕಾಂ ಝೆಲೊ" ಕವಿತೆಯ ಪುಸ್ತಕವನ್ನು ಈ ಸಂಧರ್ಭದಲ್ಲಿ ಅವರು ಲೊಕಾರ್ಪಣೆ ಮಾಡಿದರು.
ಯುವಜನರಿಗಾಗಿ ಮಂಗಳೂರು ಕೊಂಕಣಿಯನ್ನು ಇಂಗ್ಲಿಷಿನಲ್ಲಿ ಕಲಿಯಲು "ಜಟ್ಪಟ್ ಇಂಗ್ಲಿಷ್ ಕೊಂಕಣಿ" ಕ್ಯಾಲೆಂಡರನ್ನು ಎಮ್.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋರವರು ಬಿಡುಗಡೆಗೊಳಿಸಿದರು. ತಿಂಗಳ ಕೊನೆಗೆ ಬಿಡುಗಡೆಗೊಳ್ಳುವ "ಚುಟುಕಾಂ" ಪುಸ್ತಕದ ಮುಖಪುಟವನ್ನು ಮಿಲಾಗ್ರಿಸ್ ಚರ್ಚಿನ ಸಹಾಯಕ ಗುರು, ಫಾ. ಐವನ್ ಡಿಸೋಜರವರು ಬಿಡುಗಡೆಗೊಳಿಸಿದರು.
ನಂತರ ಬಂಟ್ವಾಳದ ಜಾಸ್ಮಿನ್ ಮತ್ತು ಪಂಗಡದವರಿಂದ "ಗುಮ್ಟಾಂ" ಕಾರ್ಯಕ್ರಮವಿತ್ತು. ವೇದಿಕೆಯಲ್ಲಿ ಕೊಂಕಣಿ ಲೇಖಕರ ಸಂಘ, ಕರ್ನಾಟಕದ ಸಂಚಾಲಕ, ರಿಚಾರ್ಡ್ ಮೊರಾಸ್, ಹಿರಿಯ ಕೊಂಕಣಿ ಲೇಖಕ ಜೆ.ಎಫ್.ಡಿಸೋಜಾ ಅತ್ತಾವರ, ಜಾನೆಟ್ ಡಿಸೋಜಾರವರು ಉಪಸ್ಥಿತರಿದ್ದರು.
ಕೊಂಕಣಿ ಸಾಹಿತಿ ಡೊಲ್ಫಿ ಕಾಸ್ಸಿಯಾ, ಹಾಗೂ ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕರನ್ನು ಸನ್ಮಾನಿಸಲಾಯಿತು. ರೋಶನ್ ಕ್ರಾಸ್ತಾ ಮತ್ತು ವಿಯೋಲಾರವರು ಕಾರ್ಯಕ್ರಮ ನಿರೂಪಿಸಿದರು. ಜಾನೆಟ್ ಡಿಸೋಜಾ ವಂದಿಸಿದರು.