ಮಂಗಳೂರು:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಹರಿಕಥಾ ಪರಿಷತ್(ರಿ) ಮಂಗಳೂರು ಜಂಟಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಹತ್ತು ದಿನಗಳ ‘ಹರಿಕಥೆ ಪರ್ಬ’ವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ‘ತುಳು ಭಾಷೆಯಲ್ಲಿ ಹತ್ತು ದಿನಗಳ ಹರಿಕಥಾ ನಿರೂಪಣೆ ಉತ್ತಮ ಪ್ರಯತ್ನವಾಗಿದ್ದು ಈ ಪ್ರಯತ್ನ ವ್ಯಾಪಕವಾಗಲಿ’ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ‘ಜನರಿಗೆ ಸಂಸ್ಕಾರ ನೀಡುವ ಶ್ರೇಷ್ಠ ಕಲೆಯಾದ ಹರಿಕಥೆಯು ಪ್ರತಿಯೊಂದು ಧಾರ್ಮಿಕ ಕೇಂದ್ರದಲ್ಲಿ ಅದರಲ್ಲೂ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ಎಲ್ಲಾ ದೇವ,ದೈವಸ್ಥಾನಗಳಲ್ಲಿ ಇಂತಹ ನೈತಿಕ ಮೌಲ್ಯವನ್ನು ಭೋಧಿಸುವ ಮುಖೇನ ಸುಸಂಸ್ಕೃತ ಸಮಾಜವನ್ನು ಕಟ್ಟುವ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಶುದ್ಧ, ಸ್ವಾಸ್ಥ್ಯ, ರಾಷ್ಟ್ರಭಕ್ತ ವ್ಯಕ್ತ ನಿರ್ಮಾಣದ ಕಾರ್ಯ ಸಾಧ್ಯವಾಗುತ್ತದೆ. ಆದ್ದರಿಂದ ಆಯಾಯ ಪ್ರಾದೇಶಿಕ ಭಾಷೆಯಲ್ಲಿ ಈ ಸತ್ಕಾರ್ಯವಾಗಬೇಕು, ತುಳು ಭಾಷೆಯಲ್ಲಿಯೂ ಹರಿಕಥಾ ಸಾಹಿತ್ಯ ಇನ್ನಷ್ಟು ಬೆಳೆಯುವಂತೆ ಮಾಡಬೇಕು’ ಎಂದರು.
ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ.ಮಹಾಬಲ ಶೆಟ್ಟಿಯವರು ಪೂಜ್ಯ ಎಡನೀರು ಕೇಶವಾನಂದ ಭಾರತಿ ಸ್ವಾಮಿಗಳ ಸಂಸ್ಮರಣಾ ಭಾಷಣ ಮಾಡಿದರು. ಉದ್ಯಮಿ ಮಧುಸೂದನ ಆಯರ್ ಉಪಸ್ಥಿತರಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಹರಿಕಥಾ ಪರ್ಬದ ಸದಸ್ಯ ಸಂಚಾಲಕರಾದ ಚೇತಕ್ ಪೂಜಾರಿ ಸ್ವಾಗತಿಸಿದರು. ಡಾ. ಎಸ್.ಪಿ.ಗುರುದಾಸ್ ಧನ್ಯವಾದ ಸಮರ್ಪಿಸಿದರು. ಸುಧಾಕರ್ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಾರ್ಕಳದ ವೈ.ಅನಂತ ಪದ್ಮನಾಭ ಭಟ್ ಇವರಿಂದ ‘ಬಗ್ತೆ ಭೀಷ್ಮೆ’ ಹರಿಕಥೆ ನಡೆಯಿತು. ಎಂ.ರಮೇಶ್ ಹೆಬ್ಬಾರ್ ಹಾಗೂ ಪ್ರದೀಪ್ ಉಪಾಧ್ಯಾಯ ಹಿಮ್ಮೇಳದಲ್ಲಿ ಸಹಕರಿಸಿದರು.