ಮಂಗಳೂರು:- ಜಗದಗಲಕ್ಕೆ ಹಬ್ಬಿದ ಸಾಂಕ್ರಾಮಿಕ ಮಹಾಮಾರಿ ರೋಗ, ಕೊರೋನ (ಕೋವಿಡ್ 19)ವು ಸಮಸ್ತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಗಾಬರಿ ತರುವ ವಿಷಯ. ಜನರು ಜೀವ ಭಯದಲ್ಲಿರುವ ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಧಾರ್ಮಿಕ ತಜ್ಞರ ಸಲಹೆ ಸೂಚನೆ, ಮಾರ್ಗದರ್ಶನದಂತೆ ಮಾನಸಿಕ ಧೈರ್ಯ, ಶಾರೀರಿಕ ಕ್ಷಮತೆ ಕಾಪಾಡಿಕೊಳ್ಳಲು ಹಾಗೂ ಮಹಾಮಾರಿ ರೋಗ ಕೊರೋನದ ನಿರ್ಮೂಲನಕ್ಕಾಗಿ   ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ, ಮಾನ್ಯ ಸಂಸದರು ಹಾಗೂ ಕರ್ನಾಟಕ ಬಿ.ಜೆ.ಪಿ. ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಅವರ ಸಾರಥ್ಯದಲ್ಲಿ ಇದೇ ಬರುವ ದಿನಾಂಕ 03-08-2020, ಸೋಮವಾರ, ಪೌರ್ಣಮಿಯಂದು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಆಯುಷ್ಯ ಸೂಕ್ತ ಸಹಿತ ಘರ್ಮ ಪ್ರಾಯಶ್ಚಿತ್ತ ಸೂಕ್ತ (ಕ್ರಿಮಿನಾಶಕ ಸೂಕ್ತ) ಹವನ ನಡೆಸುವುದಾಗಿ ನಿಶ್ಚಯಿಸಲಾಗಿದೆ. ಇದು ಯಜುರ್ವೇದದ  ಆರಣ್ಯಕದಲ್ಲಿ ಚತುರ್ಥ ಪ್ರಶ್ನದಲ್ಲಿ ಬರುವ ಘರ್ಮ ಪ್ರಾಯಶ್ಚಿತ್ತ ಮಂತ್ರ ಪೂರ್ವಕವಾದ   ಒಂದು ವಿಶೇಷ ಹವನವಾಗಿದೆ.

ಸಮಸ್ತ ಸಮಾಜದ ಹಾಗೂ ಪ್ರತಿಯೊಬ್ಬರ ವೈಯಕ್ತಿಕ  ಆರೋಗ್ಯ ರಕ್ಷಣೆಯ ಹಿತ ದೃಷ್ಟಿಯಿಂದ  ನಡೆಸಲಾಗುವ ಈ ವಿಶೇಷ ಹವನದಲ್ಲಿ  ಸರಕಾರಿ ನಿಯಮ ಪಾಲನೆ ಮಾಡಿ ಸೀಮಿತ ಸಂಖ್ಯೆಯಲ್ಲಿ  ಭಕ್ತರು  ಭಾಗವಹಿಸಿ, ಲೋಕದ  ಸಮಸ್ತ ಜನರ ಆರೋಗ್ಯಕ್ಕಾಗಿ ಪ್ರಾರ್ಥಿಸಿ,  ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಸಾಮಾಜಿಕ ಅಂತರವನ್ನು ಕಾಯುವ ದೃಷ್ಟಿಯಿಂದ ಈ ಹವನದ ನೇರಪ್ರಸಾರವನ್ನು ಕೂಡಾ  ಬೆಳಗ್ಗೆ 9.00 ರಿಂದ ‘ನಮ್ಮ ಕುಡ್ಲ’ ವಾಹಿನಿಯಲ್ಲಿ ಆಯೋಜಿಸಲಾಗಿದೆ. ಭಗವದ್ಭಕ್ತರಿಗೆ ತಮ್ಮ ಮನೆಯಲ್ಲಿಯೇ ಕುಳಿತು ವೀಕ್ಷಿಸುವ ಅವಕಾಶವಿರುತ್ತದೆ.

ಇದೇ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭಗವ್ದಭಕ್ತರಿಂದ  ದೇಣಿಗೆ ಸಂಗ್ರಹಕ್ಕೂ ಚಾಲನೆ ನೀಡಲಾಗುವುದು.