ಪುತ್ತೂರು: ಮಂಗಳೂರು ವಿವಿಯ ಅಧೀನ ಹಾಗೂ ಕೆಥೊಲಿಕ್ ಶಿಕ್ಷಣ ಮಂಡಳಿಯ ಆಡಳಿತಕ್ಕೆ ಒಡಪಡುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2020-21 ನೇ ಸಾಲಿನ ಬಿಎ, ಬಿಕಾಮ್, ಬಿಎಸ್ಸಿ, ಬಿಬಿಎ, ಬಿಸಿಎ ಮತ್ತು ಬಿಎಸ್‍ಡಬ್ಲ್ಯೂ ಪದವಿ ಕೋರ್ಸುಗಳ ದಾಖಲಾತಿ ಪ್ರಕ್ರಿಯೆಯನ್ನು ಜುಲೈ 23 ರಂದು ಆರಂಭಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಇವರು ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದಾಖಲಾತಿಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಕ್ರಮಗಳ ಕುರಿತು ವಿವಿಧ ಕೋರ್ಸುಗಳ ಡೀನ್‍ಗಳಿಗೆ ಮಾಹಿತಿಯನ್ನು ನೀಡಿದರು. ಪ್ರಸ್ತುತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಕಾಲೇಜಿನ ಕಛೇರಿಯ ಬಳಿಯಿರುವ ವಿಶಾಲವಾದ ಐಕ್ಯುಎಸಿ ಸಭಾಭವನದಲ್ಲಿ ಆರು ಕೋರ್ಸುಗಳಿಗೆ ಸಂಬಂದಿಸಿದ ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗಿದ್ದು, ಎಲ್ಲಾ ಕೌಂಟರ್‍ಗಳಲ್ಲಿ ಸಂಬಂಧಪಟ್ಟ ಪ್ರಾಧ್ಯಾಪಕರು ದಾಖಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಆರೋಗ್ಯ ಸುರಕ್ಷತೆಯ ದೃಷ್ಟಿಯಲ್ಲಿ ಕಛೇರಿಯ ಮುಂಭಾಗದಲ್ಲಿ ಸ್ವಯಂಚಾಲಿತ ಸ್ಯಾನಿಟೈಸರನ್ನು ವ್ಯವಸ್ಥೆಗೊಳಿಸಲಾಗಿದೆ. ಪದವಿ ಶಿಕ್ಷಣವನ್ನು ನಡೆಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ಕಾಲೇಜು ಕಛೇರಿಯಿಂದ ಅರ್ಜಿ ಫಾರಂ ಹಾಗೂ ಪ್ರಾಸ್ಪೆಕ್ಟಸನ್ನು ಪಡೆದುಕೊಂಡು, ಅಗತ್ಯದ ದಾಖಲೆ ಪತ್ರಗಳೊಂದಿಗೆ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.