ನೇಪಾಳದಲ್ಲಿ ಕನ್ನಡ ಕಂಪು
ಕನ್ನಡ ಕಂಪನು ವಿದೇಶ ನೆಲದಲಿ
ಹರಡಲು ಹೊರಟೆವು ನಾವಂದು
ಚೆನ್ನು ಪ್ರದೀಪರ ಕಥಾ ಸಂಗಮದ
ಬಯಕೆಯ ಸಂಗಮದಲಿ ಮಿಂದು
ಭಾರತದುತ್ತರ ಗಡಿಯಲಿ ನೇಪಾಳ
ಎನ್ನುವ ಸುಂದರ ದೇಶವಿದೆ
ಗೋರಖ ಪುರದಿಂ ಸಾಗಲು ಪ್ರಯಾಣ
ಲುಂಬಿನಿ ಬುದ್ಧನ ತಾಣವಿದೆ.
ಮನವನು ತಣಿಸುವ ಗೌತಮಬುದ್ಧನ
ಬಗೆ ಬಗೆ ಮಂದಿರ ಸುಂದರವು
ಹನಿಮಳೆಯಂದದಿ ಹಿಮ ಸುರಿದರು ತನು
ಸಹಿಸುವ ಇಳೆಯದು ಹಸಿರಿನದು
ಮುಂದಕೆ ಸಾಗಲು ಪೋಕರ ನಗರಕೆ
ಸವಾರಿ ಹೊರಟೆವು ನಾವೆಲ್ಲ
ಚಂದದ ಕುಟಿಯಲಿ ಬಿಡಾರ ಹೂಡುತ
ಸಾಹಿತ್ಯದ ಸಂಗಮ ದಿನವೆಲ್ಲ.
ಮೂವತ್ತೈದರ ಸಾಹಿತಿ ಗಡಣದ
ವಾಚನ ಭಾಷಣ ನರ್ತನದಿ
ನಾವೆಲ್ಲರು ನಲಿದಾಡುತ ಅಲ್ಲಿಯ
ಜನಪದ ಸಾಂಗತ್ಯ ಹೊಂದುತಲಿ
ಸೊಗದ ನಿರೂಪಕಿ ಪ್ರಿಯಾ ಹರೀಶರ
ವೇದಿಕೆ ಮಾತಿನ ಸಂಕಲೆಗೆ
ಸರ್ವಾಧ್ಯಕ್ಷತೆ ವಹಿಸಿದ ಸಂತಸ
ಹೊಸೆಯಿತು ಸಂತಸ ನನ್ನೊಳಗೆ
ಹರಿಶ್ಚಂದ್ರರ ಉದ್ಘಾಟನೆ ಜೊತೆ
ಕವಿ ರೇಮಂಡ ಪೆರಾಜೆ ಸಹ
ಪುಸ್ತಕ ಬಿಡುಗಡೆ ಮಸ್ತಕ ಚೆಲುನಡೆ
ಅಶ್ರಯವಾಗಲು ಅತಿ ಹರುಷ
ಜಿನ ಸಾಹಿತ್ಯದ ಭಾಷಣ ಮಾಲಿಕೆ
ಮಾಡಿದ ನೀರಜ ನಾಗೇಂದ್ರ
ಜೊತೆ ಸೇರುತ ನುಡಿಯಾಡುತ ನಮಿಸಿದ
ಕವಿ ಪ್ರದೀಪರ ಪದ ಚಂದ
ಕಟ್ಟತ್ತಿಲ ಕವಿ ಜೊತೆ ಗೂಡುತ ಸವಿ
ಮಾತುಗಳಾಡಲು ಬಲು ಸೊಗಸು
ಬೆಟ್ಟದ ನಾಡಲಿ ಹುಟ್ಟಿದ ಮೋದಕೆ
ಎಣೆಯಿರದಾಯಿತು ಸವಿ ಕನಸು
ಮೈಸೂರಿನ ಸಾಹಿತಿ ಲಕ್ಷ್ಮಿ ಇಂದಿರರು
ಚಿತ್ರಗಾರ ಮಿತ್ರರು ಸಹಿತ
ಜ್ಯೋತಿಯ ನರ್ತನ ರಸಮಂಜರುಗಳು
ನೀಡಲು ಮನಸಿಗೆ ಬಹಳ ಹಿತ
ಅಂದವ ಬಣ್ಣಿಸೆ ಸೂರ್ಯೋದಯವನು
ಪದಗಳು ಯಾಕೋ ಸಿಗುತಿಲ್ಲ
ಚೆಂದದ ಹಸಿರಿನ ಗಿರಿ ವನ ಮಧ್ಯದಿ
ಹೊದೆಯುವ ಕಿರಣವು ಸವಿ ಬೆಲ್ಲ.
ಗಂಡಕಿ ನದಿಯದು ಹರಿಯುವ ಸೊಗವೋ
ಬಹು ಮುದ ನೀಡುವ ಪರಿಯಾಗಿ
ಸಿಂಡರಿಸುವ ಮುಖ ಇದ್ದರು ತಲ್ಲಣ
ಇಳಿದೋಡುವ ಝರಿ ಸರಿಯಾಗಿ.
ಮನಕಾಮನ ದೇವಿಯ ಗುಡಿಗೈದಲು
ಹಗ್ಗದ ಮೂಲಕ ಚಾಲನೆಯ
ತನು ಢವ ಎನ್ನುವ ಪರಿಯಲಿ ಸಾಗಲು
ಸಿಗುವುದು ಮನ ಮಾತೆಯ ಮಡಿಲು
ಮುಂದಕೆ ಸಾಗಲು ಕಠಮಂಡುವಿನಲಿ
ಪಶುಪತಿ ದರ್ಶನ ಬಲು ಚೆನ್ನ
ನಮ್ಮೂರಿನ ಹಲ ಪೂಜಾರಿಗಳ ಜೊತೆ
ಆಯಿತು ನಮ್ಮಯ ಸಮ್ಮಿಲನ.
ರುದ್ರಾಕ್ಷಿಯ ಮರ ಅಲ್ಲಲ್ಲಿರುವುದು
ನಮ್ಮಲಿ ಗೇರಿನ ಮರದಂತೆ.
ಗಗನವ ಚುಂಬಿಸುವಂತಹ ಈಶ್ವರ
ಮೂರ್ತಿಯ ಮಡಿಲಲಿ ಕಳೆ ಚಿಂತೆ.
ಅಂತೂ ಸೊಗದಲಿ ಭಾರತದಂತೆಯೆ
ಕಾಣುವ ದೇಶದ ದರ್ಶನವು
ಹೊಸ ಅನುಭವ ಹೊಸ ನೆಮ್ಮದಿ ಶಾಂತಿಯ
ತಂದಿತು ಹಿತ ಸಾಹಿತ್ಯದೊಲು.
# ಡಾ ಸುರೇಶ ನೆಗಳಗುಳಿ