ಮಂಗಳೂರು: “ದೈಹಿಕ ಸಾಮರ್ಥ್ಯ ಮತ್ತು ಕೊವಿಡ್‌ ಸಾಂಕ್ರಾಮಿಕವನ್ನು ಬೇರ್ಪಡಿಸಲಾಗದು. ಆದರೆ, ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಫಿಟ್‌ನೆಸ್ ರೋಗದ ಭಯವನ್ನು ನಿವಾರಿಸುತ್ತದೆ ”,ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಶುಕ್ರವಾರ ನಗರದ  ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಆಯೋಜಿಸಿದ್ದ “ಸಾಂಕ್ರಾಮಿಕ ರೋಗದಿಂದ ರಕ್ಷಣೆಗಾಗಿ ಫಿಟ್‌ನೆಸ್” ಕುರಿತ ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಮಾತನಾಡಿದ ಅವರು  ಫಿಟ್‌ನೆಸ್‌ ಕಾಪಾಡಿಕೊಳ್ಳುವುದರಿಂದ ನಾವು ಕೇವಲ ಬದುಕುಳಿಯದೆ, ಜೀವನವನ್ನು ನೆಮ್ಮದಿಯಾಗಿ, ಆರೋಗ್ಯಕರವಾಗಿ ಬಾಳಬಹುದು, ಎಂದರು. ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ ಅವರು ಸ್ವಾಮಿ ವಿವೇಕಾನಂದರು ಹೇಳಿದ ಆರೋಗ್ಯಕರ ಮನಸ್ಸು ಮತ್ತು ಉತ್ತಮ ದೇಹ ಎಂಬ ಮಾತನ್ನು ಉಲ್ಲೇಖಿಸಿದರು. ಫಿಟ್ನೆಸ್ ನಮ್ಮ ದುಡಿಮೆಗೆ ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲೂ ಅಗತ್ಯ, ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಜೆರಾಲ್ಡ್‌ ಸಂತೋಷ್‌ ಡಿʼಸೋಜ, ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಎಸ್‌.ಎಂ ಪ್ರಕಾಶ್‌ ಮತ್ತು ಬೆಂಗಳೂರಿನ ಸ್ಟೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾದ (SAI) ಹಿರಿಯ ಖೋ ಖೋ ಮತ್ತು ಕಬಡ್ಡಿ ತರಬೇತುದಾರ ಸತ್ಯ ಕುಮಾರ್‌ ಎಂ.ಕೆ  ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಕೇಶವಮೂರ್ತಿ ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಾವಿರಕ್ಕೂ ಹೆಚ್ಚು ಶಿಕ್ಷಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.