ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 49,310 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ14,35,453ಕ್ಕೆ ಏರಿಕೆಯಾದ್ರೆ, 708 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 32,771ಕ್ಕೆ ಬಂದು ನಿಂತಿದೆ.

14,35,453 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 9,17,568ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 4,85,114 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 5,199 ಕೋವಿಡ್-19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ಸಾವನ್ನಪ್ಪಿದ್ದವರು 82 ಮಂದಿ. ರಾಜ್ಯದಲ್ಲಿ ಒಟ್ಟು 58,417 ಸಕ್ರಿಯ ಪ್ರಕರಣಗಳಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರು 2,088 ಮಂದಿ.

ಬೆಂಗಳೂರಿನಲ್ಲಿಯೇ 1,950 ಪ್ರಕರಣಗಳು ದೃಢಪಟ್ಟಿದ್ದರೆ, 29 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಒಟ್ಟು 33,155 ಸಕ್ರಿಯ ಪ್ರಕರಣಗಳಿವೆ. ನಿನ್ನೆ 647 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.