ಉಡುಪಿ (ಸೆಪ್ಟೆಂಬರ್, 18): ಭಾರತದಲ್ಲಿ ಶೇಕಡಾ 68ರಷ್ಟು ಯುವಕರಿದ್ದು, ಅವರೆಲ್ಲರೂ ಆರೋಗ್ಯ ಹಾಗೂ ಪೌಷ್ಟಿಕಾಂಶದ ಬಗ್ಗೆ ಗಮನಹರಿಸಿದರೆ ರಾಷ್ಟ್ರ ಹೆಚ್ಚು ಬಲಿಷ್ಟವಾಗುವುದು ಹಾಗೂ ಪೌಷ್ಟಿಕ ಕೈತೋಟ ಮಾಡುವುದರಿಂದ ಮನೆಯಲ್ಲಿಯೇ ತಮಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಲ್ ಫ್ರೆಡ್ ಡಿಸೋಜ ತಿಳಿಸಿದರು.
ಅವರು ಗುರುವಾರ ಪೇತ್ರಿ ಗ್ರಾಮದಲ್ಲಿ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ನೆಹರು ಯುವ ಕೇಂದ್ರ ಉಡುಪಿ, ಸಮೃದ್ಧಿ ಮಹಿಳಾ ಮಂಡಳಿ, ಚೇರ್ಕಾಡಿ ಮತ್ತು ಇಪ್ಕೋ ವತಿಯಿಂದ, ರಾಷ್ಟ್ರೀಯ ಪೋಷಣಾ ಮಾಸದ ಅಂಗವಾಗಿ ನಡೆದ ಅಂಗನವಾಡಿ ಕಾರ್ಯಕರ್ತರು ಹಾಗೂ ಮಹಿಳೆಯರಿಗೆ ಆಹಾರ ಪೌಷ್ಟಿಕತೆ ಕುರಿತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ ಮಾತನಾಡಿ, ಪೌಷ್ಟಿಕ ಕೈತೋಟ ಮಾಡುವ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಹಲವು ವರ್ಷಗಳಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಈಗಾಗಲೇ ತರಬೇತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಪೌಷ್ಟಿಕತೆ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ಜೆ ಆಯುರ್ವೇದ ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್ ನಾಯಕ್ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಚೈತನ್ಯ ಹೆಚ್.ಎಸ್. ಪೇತ್ರಿ ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಭಟ್, ಚೇರ್ಕಾಡಿ ಗ್ರಾಮದ ಅಂಗನವಾಡಿ ಮೇಲ್ವಿಚಾರಕಿ ವನಿತಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಫ್ಕೋ ಸಂಸ್ಥೆ ವತಿಯಿಂದ ತರಕಾರಿ ಬೀಜದ ಕಿಟ್ ವಿತರಿಸಲಾಯಿತು ಹಾಗೂ ಪೌಷ್ಟಿಕತೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಜಾಥ ಹಮ್ಮಿಕೊಳ್ಳಲಾಯಿತು.
ವನಿತಾ ಶೆಟ್ಟಿ ಸ್ವಾಗತಿಸಿದರು, ಸಮೃದ್ಧಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಆಶಾ ಪಾಟೀಲ್ ನಿರೂಪಿಸಿದರು, ಸಹನಾ ಕೆ ಹೆಬ್ಬಾರ್ ವಂದಿಸಿದರು.