ಉಡುಪಿ (ಸೆಪ್ಟೆಂಬರ್, 18): ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕದ ಐಕ್ಯುಎಸಿ ವತಿಯಿಂದ ಪ್ರಾಧ್ಯಾಪಕರಿಗೆ ಆನ್‌ಲೈನ್ ತರಗತಿಗಳ ಸಮರ್ಥ ನಿರ್ವಹಣಾ ಕೌಶಲದ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. 

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ, ಕೋವಿಡ್-19 ಹಲವು ಕಷ್ಟಗಳ ನಡುವೆ ಶಿಕ್ಷಕರಿಗೆ ಆನ್‌ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಲೆಯನ್ನು ಕಲಿಸಿದೆ. ಮುಂದಿನ ದಿನಗಳಲ್ಲಿ ಇದು ಶಿಕ್ಷಣದ ಅವಿಭಾಜ್ಯ ಅಂಗವಾಗಲಿದ್ದು, ಬಹಳ ಶಿಕ್ಷಕರಿಗೆ ತರಬೇತಿಯ ಅನಿವಾರ್ಯತೆ ಇದೆ ಎಂದು ನುಡಿದರು.

    ಎಂ.ಐ.ಟಿಯ ಸಹಾಯಕ ಪ್ರಾಧ್ಯಾಪಕಿ ಮ್ಯೂಸಿಕಾ ಸುಪ್ರಿಯಾ ಮಾತನಾಡಿ, ಆನ್‌ಲೈನ್ ತರಗತಿಗಳು ನೇರ ತರಗತಿಗಳಿಗೆ ಬದಲಿ ವ್ಯವಸ್ಥೆಯಾಗಲು ಸಾಧ್ಯವಿಲ್ಲ. ಆದರೆ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಎಂದು ಅಭಿಪ್ರಾಯಪಟ್ಟು, ಗೂಗಲ್ ಕ್ಲಾಸ್ರೂಮ್ ಹಾಗೂ ಇತರ ಆ್ಯಪ್ ಬಳಕೆಯ ಬಗ್ಗೆ ತರಬೇತಿ ನೀಡಿದರು.

    ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಸುಜಯಾ ಕೆ. ಎಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಐಕ್ಯುಎಸಿ ಸಂಚಾಲಕ ಪ್ರವೀಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಸಹಸಂಚಾಲಕ ಡಾ. ಆನಂದ್ ಎಂ.ಬಿ ವಂದಿಸಿದರು.

    ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಧ್ಯಾಪಕರು ಕ್ರಿಯಾಶೀಲವಾಗಿ ಭಾಗವಹಿಸಿ ಆನ್‌ಲೈನ್ ತರಗತಿಗಳ ಸಮರ್ಥ ನಿರ್ವಹಣಾ ಕೌಶಲದ ತರಬೇತಿಯನ್ನು ಪಡೆದರು.