ಉಡುಪಿ,(ಸೆಪ್ಟೆಂಬರ್, 8): "ಜಿಲ್ಲೆಯ ಪಡುಬಿದ್ರೆ ಬೀಚ್ ಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಇನ್ನು ಒಂದು ಹೆಜ್ಜೆ ಮಾತ್ರ ಇದ್ದು, ಶೀಘ್ರದಲ್ಲಿ  ಪಡುಬಿದ್ರೆ ಬೀಚ್ ಗೆ ಬ್ಲೂ ಫ್ಲಾಗ್  ಸರ್ಟಿಫಿಕೇಶನ್ ದೊರೆಯಲಿದೆ" ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಶುಕ್ರವಾರ  ಪಡುಬಿದ್ರೆಯ ಬ್ಲೂ ಫ್ಲಾಗ್  ಬೀಚ್ ನಲ್ಲಿ , ಕೇಂದ್ರ ಸರ್ಕಾರದ  ಸ್ವಚ್ಛತಾ ಅಭಿಯಾನದ ಮುಂದುವರೆದ ಭಾಗವಾಗಿ  ನಡೆದ,  ಐಮ್  ಸೇವಿಂಗ್ ಮೈ ಬೀಚ್ ಧ್ವಜಾರೋಹಣ ಕಾರ‍್ಯಕ್ರಮದಲ್ಲಿ ಮಾತನಾಡಿದರು.

    "ದೇಶದ 13 ಬೀಚ್ ಗಳನ್ನು ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಗೆ ಮಾನ್ಯತೆಗೆ ಅಭಿವೃಧ್ದಿಪಡಿಸಿದ್ದು, ಅದರಲ್ಲಿ ಎಲ್ಲಾ ಅಗತ್ಯ ನಿಯಮಗಳ ಪಾಲನೆ ಮತ್ತು ಗುಣಮಟ್ಟ ಹೊಂದಿರುವ 8 ಬೀಚ್ ಗಳನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಜ್ಯೂರಿಗೆ ಕಳುಹಿಸಿದ್ದು, ಅದರಲ್ಲಿ  ನಮ್ಮ ಹೆಮ್ಮೆಯ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್ ಸಹ ಸೇರಿದೆ,  ಈ  ಬೀಚ್‌ಗಳಿಗೆ ಸದಸ್ಯದಲ್ಲಿಯೇ ಇಂಟರ್‌ನ್ಯಾಷ್‌ನಲ್ ಜ್ಯೂರಿ ತಂಡ ಪರಿಶೀಲನೆಗೆ ಆಗಮಿಸಲಿದ್ದು, ಪಡುಬಿದ್ರೆ ಬೀಚ್ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು,  ಬ್ಲೂ ಫ್ಲ್ಯಾಗ್ ಬೀಚ್ ಸರ್ಟಿಫಿಕೇಶನ್‌ನ ದೊರೆಯುವ ವಿಶ್ವಾಸ ಇದೆ" ಎಂದು  ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

     "ಸ್ವಚ್ಚತೆ, ಸುರಕ್ಷತೆ, ಪರಿಸರ ರಕ್ಷಣೆ, ನೀರಿನ ಗುಣಮಟ್ಟ  ಮುಂತಾದ  ಷರತ್ತುಗಳಿಗೊಳಪಟ್ಟು ಬ್ಲೂ ಫ್ಲಾಗ್ ಮಾನ್ಯತೆ ದೊರೆಯಲಿದೆ, ಪಡುಬಿದ್ರೆಯ ಬೀಚ್ ನ ಈ ಎಲ್ಲಾ ಷರತ್ತುಗಳ ಆಧಾರದಲ್ಲಿ ಅಭಿವೃಧ್ದಿಪಡಿಸಿದ್ದು, ಇಲ್ಲಿನ ಸಮುದ್ರದ ನೀರಿನ ಗುಣಮಟ್ಟ ಅತ್ಯಂತ ಶುದ್ದ ಎಂಬ ವರದಿ ಬಂದಿದೆ,  ಈ ಇನ್ನೂ ಪ್ರದೇಶವನ್ನೂ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃಧಿಗೊಳಿಸಲು ರಾಜ್ಯ ಸರ್ಕಾರಕ್ಕೆ 5 ಕೋಟಿ ರೂ ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ,  ಬೀಚ್ ಅಭಿವೃಧ್ದಿಯಿಂದ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ, ಇಲ್ಲಿ ಪ್ರವಾಸೋದ್ಯಮ ಅಭಿವೃಧ್ದಿ ಜೊತೆಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಠಿಯಾಗಲಿದೆ" ಎಂದು ಡಿಸಿ ತಿಳಿಸಿದರು.

   'ಐ ಯಾಮ್  ಸೇವಿಂಗ್ ಮೈ ಬೀಚ್' ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, "ಬ್ಲೂ ಫ್ಲಾಗ್ ಮಾನ್ಯತೆ ಹೊಂದುವ ಹಾದಿಯಲ್ಲಿರುವ ಬೀಚ್ ಇದಾಗಿದ್ದು ಪ್ರಧಾನಿಯವರ ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಬೀಚ್ ಅಭಿವೃಧ್ದಿಯಾಗುತ್ತಿದೆ, ಸ್ಥಳೀಯರಿಗೆ ಯಾವುದೇ ತೊಂದರೆಯಾಗದoತೆ,ಪರಿಸರ ರಕ್ಷಣೆಯೊಂದಿಗೆ ಇಲ್ಲಿ ಪ್ರವಾಸೋದ್ಯಮವನ್ನು ಅಭಿವೃಧ್ದಿಪಡಿಸಲಾಗುತ್ತಿದೆ" ಎಂದರು.

    ಕಾರ‍್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿ.ಪಂ ಸದಸ್ಯ ಶಶಿಕಾಂತ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯೆ ನೀತಾ ಗುರುರಾಜ್ , ಕಾಪು ತಹಸೀಲ್ದಾರ್ ಮೊಹಮದ್ ಇಸಾಕ್, ಎಸಿಟಿ ಯ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

     ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಗೆ  ಅಂತಾರಾಷ್ಟ್ರೀಯ ಜ್ಯೂರಿಗೆ  ಕಳುಹಿಸಿರುವ ದೇಶದ 8 ಕಡಲತೀರದಲ್ಲಿ ,ಏಕಕಾಲಕ್ಕೆ ವೆಬಿನಾರ್ ಮೂಲಕ  'ಐ ಯಾಮ್  ಸೇವಿಂಗ್ ಮೈ ಬೀಚ್'  ಧ್ವಜಾರೋಹಣ ನಡೆಯಿತು.

 ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಸ್ವಾಗತಿಸಿ ವಂದಿಸಿದರು.