ಇಷ್ಟಕಾಮ್ಯ

ಮಲೆನಾಡ ಮಡಿಲೂರು
ಮಾಮರದ ಕೋಗಿಲೆ
ಇಂಚರ ಕೇಳುತ ಬೆಳೆದ
ಮರಿಜಿಂಕೆ ಕಣ್ಣ ಹೆಣ್ಣವಳು
ನಸುನಗುವು ಕುಸುಮಿಸುವ
ವನಸುಮದ ಚೆಲುವೆಲ್ಲ
ಚದುರುವುದು ಅಂದ

ನಗು ಮೊಗದಿ ನಲಿವ
ನವಿಲ ಗರಿ ಬಿಚ್ಚಿ ಮುಗುಳು
ತೆಂಗ ಕಂಗಿನ ಬಾಳೆ ಬನದ
ಸಂಪಿಗೆ ಕಂಪೊಳು ಕಾದುನಿಂತಿಹಳು
ಹಲಸು ಮಾವಿನ  ನೇರಳೆ ತಣ್ಣೆಳಲ
ತಡಕಾಡಿ ಹೆಜ್ಜೆ ಗುರುತನು ಬಿಟ್ಟು
ಕಣ್ಣ ಬೆಳಕಲಿ ಗೂಡು ದೀಪ ಬೆಳಗಿಹಳು

ಮನದ ಅಲೆಯಲ್ಲಿ
ಮೊರೆಯುತಿಹ ಬಯಕೆಗಳ
ಕೂಡಿಟ್ಟು ಕಾದವನು
ಕಡಲೂರ ತೀರದ....
ಕನಸುಗಳ ಸುಕುಮಾರ
ಆಸೆಗಳ ಅಲೆಯಲ್ಲಿ ಪ್ರಣಯಿಗಳೇ
ಈ ಪಯಣಿಗರು ವಧುವರರು

ಮನವರಳಿ ಮೆರವಣಿಗೆ
ರಥವೇರಿ ನೆಡೆವಾಗ
ಕೂಗಿ ತೂಗಿ ಕಾದು ನಿಂತಿಹರೋ
ಬ್ರಹ್ಮ ಪಕ್ಷಿಯ ಆತಿಥ್ಯ
ಬ್ರಹ್ಮಕಮಲವು ಬಿರಿದು
ಬ್ರಾಹ್ಮೀ ಸುಮೂಹೂರ್ತದಲಿ
ಬೆರಳ ತುದಿಯಲ್ಲಿ ಬ್ರಹ್ಮಗಂಟಲ್ಲಿ

ವನರಾಜಿ ರಾರಾಜಿಸುವೇಳೆ
ಮೇಘಗಳೇ  ಮಂತ್ರಘೋಷಿಸಿ
ಮುಗಿಲೆಲ್ಲ ಮಾರ್ದ್ವನಿಸೋ ವೇಳೆ
ಹೂಮಳೆ ಗರೆವಾಗ ಹಸೆಮಣೆಯೇರಿ
ಬಾಳ ಬೆಸುಗೆಯಲಿ ಬಯಸಿ...
ಬಂದಿಯಾಗುವರ  ಹರಸಿ ಹಾರೈಸಲು
ಕೂಡಿ ಬಾಳುವರು ನವದಂಪತಿಗಳಾಗೆಂದು.

-ಪ್ರೀತಿ. ಮಾಂತಗೌಡ. ಬನ್ನೆಟ್ಟಿ.