ಮಂಗಳೂರು: ಕಟೀಲು ಮೇಳದ ಪ್ರಧಾನ ಭಾಗವತ ಪದ್ಯಾಣ ಗೋವಿಂದ ಭಟ್ ಅವರಿಗೆ ಕದ್ರಿ ದೇವಸ್ಥಾನ ಬಳಿಯ ಮಂಜುನಾಥ ಕಾಲನಿಯ ಬಯಲಿನಲ್ಲಿ ನಡೆದ  ಸಮಾರಂಭದಲ್ಲಿ "ಶ್ರೀ ಕದ್ರಿ" ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬಾಲಯಕ್ಷಕೂಟದ ಸಂಸ್ಥಾಪಕ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅಭಿನಂದನಾ ಭಾಷಣ ಮಾಡಿ, ಪದ್ಯಾಣ ಪರಂಪರೆಯ ಗೋವಿಂದ ಭಟ್ಟರು  ಯಕ್ಷಗಾನ ಸೇವೆಯನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಮೂರು ದಶಕದ ಅನುಭವವ ಇದ್ದರೂ ಬೀಗದೆ ಬಾಗಿ ಬೆಳಗುತ್ತಿರುವ ಪದ್ಯಾಣರು ಕಲಾವಿದರುಗಳಿಗೆ ಮಾದರಿ ಎಂದರು. 

 ಕಾರ್ಪೊರೇಟರ್ ಮನೋಹರ ಶೆಟ್ಟಿ ಕದ್ರಿ, ಕಾರ್ಪೊರೇಟರ್ ಶಕಿಲಾ ಕಾವ, ಯಕ್ಷಬೋಧಿನಿ ಟ್ರಸ್ಟಿನ ಟ್ರಸ್ಟಿ ರವಿರಾಜ ಆಚಾರ್ಯ, ಆಯೋಜಕರಾದ ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ,  ದೀಪಾ. ಕೆ.ಎಸ್., ಋತ್ವಿಕ್ ಅಲೆವೂರಾಯ, ಸಂಹಿತಾ ಅಲೆವೂರಾಯ ಇದ್ದರು. ದೀಪಾ ಕೆ.ಎಸ್. ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಕಟೀಲ್ ಭೇಟಿ:  ಕುಂಜತ್ತೋಡಿ ಕುಟುಂಬದವರ  ಕಟೀಲು ಮೇಳದ 11ನೇ ವರ್ಷದ  ಸೇವೆಯಾಟವಾಗಿ ಶ್ರೀದೇವಿ ಲಲಿತೋಪಖ್ಯಾನ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಕಟೀಲು ಕ್ಷೇತ್ರದ  ಆನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ವಿಪ್ರ ಸಮಾಗಮ ವೇದಿಕೆಯ ಅಧ್ಯಕ್ಷ ಪಿ.ರಾಮಕೃಷ್ಣ ರಾವ್ ಭೇಟಿ‌ ನೀಡಿ, ಚೌಕಿಯಲ್ಲಿ ದೇವರ ದರ್ಶನ ಪಡೆದರು.