ಸಚಿತ್ರ ವರದಿ: ರಾಯಿ ರಾಜ ಕುಮಾರ್ ಮೂಡುಬಿದಿರೆ.
ಮೂಡುಬಿದಿರೆ, ಮೇ 30: ನಿನ್ನೆ ಅಷ್ಟೇ ಪಿಂಗಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಮೂಡುಬಿದಿರೆ ಬಸ್ಸು ನಿಲ್ದಾಣದ ಪರಿಸರ ವರದಿಯಿಂದ ಎಚ್ಚೆತ್ತುಕೊಂಡ ಮೂಡುಬಿದರೆ ಪುರಸಭಾ ಅಧಿಕಾರಿಗಳು ಹಾಗೂ ಪರಿಸರದ ಅಧಿಕಾರಿಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಇಂದು ಎರಡು ಮೂರು ಸ್ವಚ್ಛತಾ ಸಿಬ್ಬಂದಿಯೊಂದಿಗೆ ಬಸ್ಸು ನಿಲ್ದಾಣ ಪರಿಸರದ ಸ್ಥಳವನ್ನು ಸ್ವಚ್ಛ ಮಾಡುತ್ತಿದ್ದಾರೆ.



ಬಸ್ಸು ನಿಲ್ದಾಣದ ಕೆಲವು ಅಂಗಡಿಗಳವರಿಂದ ಮಾತ್ರ ಕಸ ಇತ್ಯಾದಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಉಳಿದ ಅಂಗಡಿಗಳವರು ದೂರುತ್ತಿದ್ದಾರೆ. ಪುರಸಭಾ ಸಿಬ್ಬಂದಿಗಳು ಬಸ್ಸು ನಿಲ್ದಾಣದ ಎಲ್ಲಾ ಕಡೆಯ ಅಂಗಡಿಗಳವರಿಂದಲೇ ನೇರವಾಗಿ ಕಸ ಕಡ್ಡಿಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಅಗತ್ಯ ಇದೆ ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ನಿನ್ನೆ ಹಾಗೂ ಇಂದು ಎರಡು ದಿನವೂ ಕೂಡ ಪ್ರಸ್ತುತ ವರದಿಗಾರರು ಪುರಸಭೆಯ ಮುಖ್ಯಾಧಿಕಾರಿಯವರನ್ನು ಸಂಪರ್ಕಿಸಲು ಪುರಸಭೆಯಲ್ಲಿ ಸುಮಾರು ಅರ್ಧ ಗಂಟೆ ಕಾದು ಕುಳಿತು ಕೊಂಡರೂ ಮುಖ್ಯಾಧಿಕಾರಿಗಳು ಲಭ್ಯರಾಗಲಿಲ್ಲ. ಪರಿಸರ ಅಧಿಕಾರಿಯರವಲ್ಲಿ ಕೇಳಿದರೂ- "ತಿಳಿಯದು" ಎಂಬ ಮಾಹಿತಿ ಅಷ್ಟೇ ಲಭ್ಯವಾಯಿತು.



ಬಸ್ಸು ನಿಲ್ದಾಣಕ್ಕೆ ಬಸ್ಸುಗಳು ಮೇಲೆ ತೆರಳುವ ಮಾರ್ಗದ ಎಡಬದಿಯಲ್ಲಿ ಇಡೀ ಬಸ್ಸು ನಿಲ್ದಾಣದಲ್ಲಿ ಸುರಿಯುವ ಮಳೆಯ ನೀರು ಬರುವ ಕಾಲುವೆ ಇದ್ದು ಅದಕ್ಕೆ ತಡೆಗೋಡೆಯಾಗಿ ಹಾಕಲಾಗಿದ್ದ ಕಬ್ಬಿಣದ ಮೆಶ್ ನಿರ್ನಾಮವಾಗಿ ನೀರಿನೊಂದಿಗೆ ಬರುವ ಕಸ ಕಡ್ಡಿ ಪ್ಲಾಸ್ಟಿಕ್ ಇತ್ಯಾದಿ ಎಲ್ಲವೂ ಕೂಡ ಹೋಟೆಲ್ ಗಣೇಶದ ಎದುರಿಗೆ ಬಂದು ರಾಶಿಯಾಗಿ ಮುಂದೆ ಹೋಗಲಾಗದೆ ಒಳಚರಂಡಿ ಸರಿಯಿಲ್ಲದೆ ತೊಂದರೆಯಾಗುತ್ತಿದೆ. ಇದರಿಂದಾಗಿ ಕಳೆದ ಒಂದು ವರ್ಷದಿಂದ ಎದ್ದು ಹೋಗಿರುವ ಚಪ್ಪಡಿ ಕಲ್ಲುಗಳಲ್ಲಿ ಹಲವಾರು ಮಂದಿ ಸಾರ್ವಜನಿಕರು ಕಾಲುಗಳನ್ನು ಸಿಕ್ಕಿಸಿಕೊಂಡು ಒದ್ದಾಡಿದ ಹಲವಾರು ಉದಾಹರಣೆಗಳಿವೆ. ಇಷ್ಟಾದರೂ ಈ ಒಂದು ವರ್ಷಗಳಲ್ಲಿ ಎದ್ದು ಹೋಗಿ ಅರೆಬರೆಯಾದ ಚಪ್ಪಡಿ ಕಲ್ಲು ಹಾಗೆಯೇ ಬಿದ್ದಿವೆ. ಸಾರ್ವಜನಿಕರಿಗೆ ಈಗಲೂ ತೊಂದರೆಯನ್ನು ಉಂಟುಮಾಡುತ್ತಿದೆ. ಹರಿದು ಬರುವ ನೀರು ಮುಂದುವರಿಯುವುದಕ್ಕೆ ತಡೆಯಾಗಿರುವ ಪ್ಲಾಸ್ಟಿಕ್, ಕಸ, ಕಡ್ಡಿ ಇತ್ಯಾದಿ ಮರಳುಗಳೊಂದಿಗೆ ಸೇರಿ ಒಳಚರಂಡಿಯಲ್ಲಿ ಶೇಖರಣೆಯಾಗಿ ತೊಂದರೆ ಉಂಟು ಮಾಡುತ್ತಿದೆ. ಅದೆಲ್ಲವನ್ನು ತಕ್ಷಣವೇ ನಿವಾರಿಸುವ ಅನಿವಾರ್ಯತೆ, ಮಳೆಗಾಲಕ್ಕೆ ಮೊದಲು ಪುರಸಭೆಯವರಿಗೆ ಇರುತ್ತದೆ.
ಹಿಂದಿನ ವರದಿ
ಮೂಡುಬಿದಿರೆ ಸಾರ್ವಜನಿಕ ಬಸ್ಸು ನಿಲ್ದಾಣದ ಪರಿಸರ!! - article by Raee Raja Kumar