ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಹಿಂದಿ ಶಿಕ್ಷಕರ ಕಾರ್ಯಾಗಾರ ಬೆಂಗಳೂರು ಶಿಕ್ಷಕರ ಸದನದಲ್ಲಿ ಸಪ್ಟೆಂಬರ್ 29ರಂದು ನಡೆಯಿತು. ಹಿಂದಿ ಶಿಕ್ಷಕರ ರಾಜ್ಯ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ದಿನೇಶ್ ಗುಂಡೂರಾವ್ ಭಾರತದ ದಾದಿಯರು ಪ್ರಪಂಚದಾದ್ಯಂತ ಉತ್ತಮ ಸ್ಥಾನ, ಗೌರವ ಪಡೆಯುತ್ತಾರೆ. ಕಾರಣ ಇಂಗ್ಲಿಷ್ನೊಂದಿಗೆ ಎಲ್ಲಾ ಭಾಷೆಗಳನ್ನೂ ಕಲಿಸುತ್ತಿರುವುದು. ಭಾರತದಲ್ಲಿ ಹಿಂದಿ ಭಾಷೆಯ ಕಲಿಕೆ ಅತೀ ಪ್ರಾಮುಖ್ಯ. ಅದರೊಂದಿಗೆ ಕೌಶಲ್ಯ ಆಧಾರಿತ ವೃತ್ತಿ ಶಿಕ್ಷಣವೂ ಇರಲಿ ಎಂದು ಅಭಿಪ್ರಾಯಪಟ್ಟರು.


ವಿಧಾನಪರಿಷತ್ ಉಪ ಸಭಾಧ್ಯಕ್ಷ ಪುಟ್ಟಣ್ಣಯ್ಯ ರವರೂ ಸಚಿವರ ಅಭಿಪ್ರಾಯಗಳನ್ನು ಅನುಮೋದಿಸಿದರು. ಜಾತಿ, ಧರ್ಮ ರಹಿತ ಪವಿತ್ರ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿತು ಬೆಳೆಯಬೇಕು ಎಂದು ಹಾರೈಸಿದರು. ಹಿಂದಿ ಶಿಕ್ಷಕರ ಬೇಡಿಕೆಯಾದ 5 ಅವಧಿ, ಪರಿವೀಕ್ಷಕರ ನೇಮಕವೂ ಆಗಬೇಕು ಎಂದು ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.
ವೇದಿಕೆಯಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದ ಬಸಪ್ಪ, ಡಯಟ್ ನ ಉಪ ನಿರ್ದೇಶಕಿ ನಸ್ರೀನ್ ತಾಜ್, ಆಯುಕ್ತಾಲಯದ ಸಹ ನಿರ್ದೇಶಕ ಮೊಯಿದ್ದೀನ್, ಸಂಘದ ಗೌರವಾಧ್ಯಕ್ಷ ಡಿ.ಎಂ.ರಾಥೋಡ್, ಪ್ರಭಾರಿ ರಾಜ್ಯಾಧ್ಯಕ್ಷ ಮಾಲತೇಶ ಛಲವಾದಿ, ಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಪದಾಧಿಕಾರಿಗಳಾದ ಯೋಗೀಶ್, ಮಹೇಶ್, ರಾಜ್ಯ ಪದಾಧಿಕಾರಿಗಳು ಹಾಜರಿದ್ದರು.


ಸಂಪನ್ಮೂಲ ವ್ಯಕ್ತಿ ಮಹೇಶ್ ಪಾಟೀಲ್ ಕಾರ್ಯಾಗಾರ ನಡೆಸಿಕೊಟ್ಟರು. ರಾಜ್ಯ ಹಿಂದಿ ಶಿಕ್ಷಕ ರತ್ನ ಪಡೆದವರನ್ನು ಸಂಮಾನಿಸಲಾಯಿತು. ಜಿಲ್ಲಾ ಅಧ್ಯಕ್ಷರು, ರಾಜ್ಯ ಪದಾಧಿಕಾರಿಗಳನ್ನು ಸಂಮಾನಿಸಲಾಯಿತು. ಆಜೀವ ಸದಸ್ಯತ್ವ ಪಡೆದವರಿಗೆ ಗುರುತಿನ ಚೀಟಿ ಬಿಡುಗಡೆಗೊಳಿಸಿ ವಿತರಿಸಲಾಯಿತು. ಬೆಂಗಳೂರು ಜಿಲ್ಲಾ ಅಧ್ಯಕ್ಷ ಶಶಿಧರ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನಿತರ ಪಟ್ಟಿಯನ್ನು ಮಮತಾ ಓದಿದರು.