ಸಂಘರ್ಷ, ಆಂತರ್ಯದಲ್ಲೋ ?  ಅಥವಾ ಬಾಹ್ಯವಾಗೊ ? ಒಂದಲ್ಲಾ ಒಂದು ರೀತಿ ಎಲ್ಲರೂ ನಡೆಸುತ್ತಲೇಯಿರುತ್ತೇವೆ. ಈ ಬದುಕು ಏರಿಳಿತಗಳ ಸಾಗರ, ತಿರುವುಗಳ ಆಗರ. ಹೊರಗೊ-ಒಳಗೊ, ಒಟ್ಟಾರೆ ಸಮಸ್ಯೆಗಳಿಲ್ಲದ, ಗೊಂದಲಗಳಿಲ್ಲದ ಜೀವನ ಎಲ್ಲರಿಗೂ ದಕ್ಕುವುದಿಲ್ಲ. ಯಾರಿಗೂ ದಕ್ಕೇ ಇಲ್ಲ ಅಂತಲ್ಲ. ಪ್ರತಿಯೊಬ್ಬರ ಬದುಕು, ನಿಲುವುಗಳು, ಎಲ್ಲವೂ ಬೇರೆಯೆ. ಸ್ತ್ರೀಯರ ಬದುಕಿನ ಹಾದಿ ಹಾಗು ಪುರುಷರ ಹಾದಿಯು ಬೇರೆಯೆ. ಯಾವುದೋ ಒಂದು ಗಮ್ಯದಲ್ಲಿ ಒಂದಾದಂತೆ ಕಂಡರೂ, ನಡಿಗೆಯಲ್ಲಿ ಕವಲುಗಳು ಇದ್ದೇ ಇರುತ್ತದೆ.

ಪುರುಷರು ತಮ್ಮ ವೈಯಕ್ತಿಕ / ವೃತ್ತಿ ಬದುಕು ಎರಡರಲ್ಲೂ ಯಶಸ್ವಿಯಾಗಿ ಸಾಗುವುದು ತೀರ ಸಾಮಾನ್ಯವೆ. ಆದರೆ ಸ್ತ್ರೀಯರ ವಿಷಯ ಕೊಂಚ ವಿಭಿನ್ನ. ಯಾಕೆಂದರೆ ಅವಳಿಗೆ ವೃತ್ತಿ ಬದುಕಿನ ಹೊರೆಗಿಂತ ವೈಯಕ್ತಿಕ ಭಾರಗಳೆ ಹೆಗಲನ್ನು ಜಗ್ಗುತ್ತಿರುತ್ತವೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ಎಂಬ ಉಕ್ತಿ ನಿಜವೆ ಆದರು, ಒಪ್ಪಿಕೊಳ್ಳಲು ಹಿಂಜರಿಯುವವರನೇಕ. ಯಶಸ್ವಿ ಪುರುಷರ ಹಿಂದೆ ಮಾತ್ರ ಸ್ತ್ರೀ ಇರುತ್ತಾಳೆ/ ಹೋಗುತ್ತಾಳೆ ಎಂದು ಟ್ರೋಲ್ ಮಾಡಿಕೊಂಡು ತಿರುಗುವವರ ಹಿಂದೆಯೂ ಒಂದು ಕುಟುಂಬವಿರುತ್ತದೆ. ಆ ಕುಟುಂಬದಲ್ಲಿಯು ಸ್ತ್ರೀ ಇರುತ್ತಾಳೆ ಎಂಬುದನ್ನು ಯಾಕೆ ಮರೆಯುತ್ತಾರೊ ?! ಸ್ತ್ರೀ ಇಲ್ಲದ ಮನೆ ಒಂದು ಚೆಂದದ ಕುಟುಂಬವಾಗುವುದಾದರು ಹೇಗೆ ? ಹೇಗೆ ಈ ಸೃಷ್ಟಿಗೆ ಶಕ್ತಿ ಆಧಾರವೊ, ಹಾಗೆ ಒಂದು ಮನೆ/ ಕುಟುಂಬಕ್ಕೆ ಸ್ತ್ರೀಯೆ ಆಧಾರ. ಇನ್ನು ಹೊರಗು ಒಳಗು ಒಂದಷ್ಟು ಘರ್ಷಣೆಗಳು ಸದಾ ಕಾಡುತ್ತಿರುತ್ತವೆ, ಅದು ಕೆಲವೊಮ್ಮೆ ಅವಳ ಹುಟ್ಟಿನ ಬಗೆಗೊ ಅಥವಾ ಬದುಕಿನ ಬಗೆಗು...

ವರ್ಗ ಯಾವುದೇ ಇರಲಿ. ಅಥವಾ ಕುಟುಂಬ ಯಾವುದೇ ಇರಲಿ. ಗಂಡು ಮಗುವಿಗೆ ಮನೆಗಳಲ್ಲಿ ದಕ್ಕುವಷ್ಟೇ ಪ್ರಾಶಸ್ತ್ಯ ಹೆಣ್ಣುಮಕ್ಕಳು ಹುಟ್ಟಿದಾಗಲೂ ಸಿಕ್ಕರೆ, ಮನೆಮಗನಷ್ಟೆ ಗೌರವಾದರಗಳು ಮಗಳಿಗೂ ಸಿಕ್ಕರೆ, ಅವಳ ಧೃಡತೆ ಯೋಚನೆಗಳ ದಿಕ್ಕು ಬದಲಾದಂತೆ, ಗಟ್ಟಿಗೊಳ್ಳುತ್ತಾ ಹೋಗುತ್ತಾಳೆ ಅವಳು. ತನ್ನವರಿಗಾಗಿ ಎಂತಹ ತ್ಯಾಗಕ್ಕಾದರು ಸಿದ್ದವಾಗುವವಳಿಗೆ, ಉತ್ತಮ ಸಮಾಜಕ್ಕಾಗಿಯು ಶ್ರಮಿಸುತ್ತಾಳೆ. ಇಲ್ಲವಾದರೆ, ಮೇಲ್ವರ್ಗದ ಕುಟುಂಬದಲ್ಲಿ ಬೆಳೆದವರಿಗೆ ಈ ಯೋಚನೆಗಳ / ಸಮಾಜದ ಕಠೋರತೆಗಳ ಬಿಸಿ ತಟ್ಟದೆಯಿರಬಹುದು. ಆದರೆ ಮದ್ಯಮವರ್ಗ ಮತ್ತು ಕೆಳವರ್ಗದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಜೀವನದಲ್ಲಿ ಒಮ್ಮೆಯಾದರೂ, ತನಗೇಕೆ ಬೇಕಿತ್ತು ಈ ಜನ್ಮ ಎನ್ನಿಸದೆ ಇರದು !.

ಜೀವನ ಪೂರ್ತಿ ತನ್ನನ್ನು  ಸುತ್ತುವರಿದ ಪರಿಸರದಲ್ಲಿ ತೊಳಲುತ್ತಾ, ಅವಕಾಶ ಸಿಕ್ಕರೆ ತನ್ನ ಗುರಿಯೆಡೆಗೆ ತೆವಳುತ್ತಾ, ಸಿಗದೆ ಮತ್ಯಾವುದೊ ವರ್ತುಲದೊಳಗೆ ಬಂಧಿಯಾದರೆ ಮರುಗುತ್ತಾ ಕಾಲ ಸವೆಸುವವಳೊಳಗೆ ಸದಾ ನಿಲ್ಲದ ಸಂಘರ್ಷ. ಮೊದಲು ತನ್ನ ಹೆತ್ತವರಿಗಾಗಿ, ವಿವಾಹದ ನಂತರ ಗಂಡನ ಮನೆಯವರಿಗಾಗಿಯೆ ತನ್ನೆಲ್ಲಾ ಆಸೆಗಳನ್ನು ಮುಡಿಪಿಟ್ಟು, ತನ್ನ ಪ್ರಪಂಚವನ್ನು, ಆಗಾಧ ಕನಸುಗಳನ್ನು ಸಂಕುಚಿತಗೊಳಿಸಿಕೊಳ್ಳುತ್ತಾ ಸಾಗುವವಳಿಗೆ, ತನ್ನವರ ಏಳ್ಗೆಯಲ್ಲೆ ತನ್ನ ಸಾರ್ಥಕತೆ ಎಂದುಕೊಂಡವಳಿಗೆ, ತನ್ನ ವೈಯಕ್ತಿಕತೆ ಹಳ್ಳ ಹಿಡಿದಿರುವು ಅರಿವಿಗೆ ಬಂದಿರುವುದೇಯಿಲ್ಲ ! ಅಥವಾ ಅರಿವಾದರು ತನ್ನವರೆದುರು ತನ್ನತನವೆಲ್ಲ ಗೌಣ !.

ಆಕೆಯ ಗಂಡನೊ ಅಥವಾ ಮಗನೊ ಇನ್ಯಾರೊ, ಸಕ್ಸೆಸ್ ಫುಲ್ ಪರ್ಸನ್ ಎನಿಸಿಕೊಂಡು ವೇದಿಕೆಮೇಲೆ ನಿಂತು, ತನ್ನ ಯಶಸ್ಸಿಗೆ ತನ್ನ ಕುಟುಂಬವೆ ಕಾರಣ ಎಂದು ಭಾಷಣ ಬಿಗಿಯುವಾಗ, ಈಕೆ ಹಿರಿಹಿರಿ ಹಿಗ್ಗುತ್ತಾಳೆ. 'ತಾನೂ ಆ ರೀತಿ ಒಬ್ಬ ಯಶಸ್ವಿ ವ್ಯಕ್ತಿಯಾಗಿ ನಿಂತಿರುತ್ತಿದ್ದರೆ !?' ಎಂದು ಎಂದೋ ಕಂಡ ಸಾಕಾರವಾಗದ ಸ್ವಪ್ನವನ್ನು ಮರೆಯುತ್ತಾಳೆ, ಅಥವಾ ಮರೆತಂತೆ ನಟಿಸುತ್ತಾಳೆ !. ಕಂಡೂ ಕಾಣದಂತ ಹನಿಯೊಂದು ಕಣ್ಣಂಚಲ್ಲಿ ಸರಿದು ಹೋಗಿರುತ್ತದೆ. ತಮಗಾಗಿ ಮತ್ತು ಕುಟುಂಬದ ಯಶಸ್ಸಿಗಾಗಿ ಅವಳು ಪಡುವ ಪರಿಶ್ರಮ ಕಂಡರೂ, ಅವಳಿಗೂ ಒಂದು ಕನಸ್ಸಿರುತ್ತದೆ, ಅದನ್ನು ಯಶಸ್ವಿಗೊಳಿಸಲು ತಾವೂ ‍ಅವಳ ಜೊತೆ ನಿಲ್ಲಬೇಕು ಎಂದು ಯಾಕೆ ಎಲ್ಲರಿಗೂ ಅನ್ನಿಸುವುದಿಲ್ಲ ?. ಮನೆಯವರಿಗೆ ಆದ್ಯತೆ ಅವಳ ಕರ್ತವ್ಯವಷ್ಟೆ ಎಂದುಕೊಂಡು ಸುಮ್ಮನಾಗುವರೇನೊ !!. ಇಂತಹ ಯೋಚನೆಗಳಿರುವ ಮನಸ್ಥಿತಿಗಳು ಬದಲಾಗದ ಹೊರತು, ಇನ್ನೆಷ್ಟೇ ಶತಮಾನಗಳುರುಳಿದರು ಸಮಾಜ / ದೇಶ ಬದಲಾಗದು. ದೇಶದ ಅಥವಾ ಸಮಾಜದ ಪ್ರಗತಿಗೆ ಕೇವಲ ಆರ್ಥಿಕತೆಯೆ ಆಧಾರವಲ್ಲ. ಸ್ತ್ರೀಯೆಡೆಗಿನ ನೋಟ ಮತ್ತು ನಿಲುವುಗಳು ಬದಲಾಗದಿದ್ದರೆ ಯಾವ ದೇಶವು ಉದ್ದಾರವಾಗಲಾರದು. ಆಧುನಿಕತೆಯೊಳಗಿನ ನೈತಿಕ ದಿವಾಳಿತನ ಸಮಾಜವನ್ನು ಕಂಗೆಡಿಸದೆ ಬಿಡದು. ಮಹಿಳಾ ದಿನಾಚರಣೆ ಈ ಒಂದು ದಿನಕ್ಕೆ ಸೀಮಿತವಾಗದಿರಲಿ..! ಪ್ರತಿದಿನ ಪ್ರತೀಕ್ಷಣ ಅವಳನ್ನು ಗೌರವಿಸುವ ಆಚರಣೆ ಜಾರಿಗೆ ಬರಲಿ...

_ಪಲ್ಲವಿ ಚೆನ್ನಬಸಪ್ಪ ✍