ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಆರಂಭಿಸಿದ ಜನೌಷಧಿ  ಕೇಂದ್ರಗಳಿಗೆ ಪ್ರಧಾನ ಮಂತ್ರಿ ಮುಖ ಅಂಟಿಸಿದ ಸರಕಾರದ ಒಳಗುಟ್ಟು ಏನು?

2000 ಇಸವಿಗೆ ಸ್ವಲ್ಪ ಮೊದಲು ವಿಶ್ವ ಸಂಸ್ಥೆಯ ಸಹ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆಯು (ಹೂ) ಜೆನೆರಿಕ್ ಮದ್ದುಗಳನ್ನು ಬ್ರಾಂಡ್ ಔಷಧಿಗಳಾಗಿಸಿ ಕಾಸು ದೋಚುವ ಔಷಧಿ ಕಂಪೆನಿಗಳ ಬಗೆಗೆ ಆತಂಕ ವ್ಯಕ್ತಪಡಿಸಿತು. ಒಂದು ವಿಶಿಷ್ಟ ಮದ್ದು ಬ್ರಾಂಡ್ ಮದ್ದು ಆದಾಗ ಹತ್ತಿಪ್ಪತ್ತು ಪಟ್ಟು  ಹೆಚ್ಚು ಬೆಲೆ ಏರಿಸಿ ಕೂರುವುದು ಹೇಗೆ? ಇದು ಔಷಧ ವಿಜ್ಞಾನಿಗಳನ್ನು ಕಾಡುತ್ತಿದ್ದ ಪ್ರಶ್ನೆ. ಒಂದು ಮಟ್ಟದಲ್ಲಿ ಜಗತ್ತಿನಲ್ಲೆಲ್ಲ ಚರ್ಚೆ ಆದರೂ ಇದಕ್ಕೆ ಅಂಥ ಮಹತ್ವ ದೊರೆಯಲಿಲ್ಲ. ಕಾರಣ ಔಷಧ ಮಾರಾಟ ಒಂದು ವ್ಯಾಪಾರವೇ ಹೊರತು ಸೇವೆ ಆಗಿರಲಿಲ್ಲ. ವ್ಯಾಪಾರಕ್ಕೆ ಶೇರುದಾರರು ಹೇಗೆ ಇರುತ್ತಾರೋ ಪುಕ್ಕಟೆ ಪಾಲುದಾರರೂ ಇರುತ್ತಾರೆ.

ಜೆನೆರಿಕ್ ಎಂದರು ಒಂದು ವಿಶಿಷ್ಟ ಮದ್ದು ಇಲ್ಲವೇ ಮೂಲ ಮದ್ದು. ಬ್ರಾಂಡ್ ಮದ್ದಿನಲ್ಲಿ ಔಷಧ ಕಂಪೆನಿಯವರು ಸ್ವಲ್ಪ ವ್ಯತ್ಯಾಸ ಇರಿಸಿ, ಆಕರ್ಷಕ ಪ್ಯಾಕ್ ಮಾಡಿ ಹತ್ತಿಪ್ಪತ್ತು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಬಲ್ಲರು. ಅಲ್ಲದೆ ಕೆಲವು ಬ್ರಾಂಡ್ ಮದ್ದಿಗೆ ಜಾಹೀರಾತು ಕೂಡ ಇರುತ್ತದೆ. ಜೀವರಕ್ಷಕ ಮದ್ದು ಹೀಗೆ ವ್ಯಾಪಾರೀ ಸರಕು ಎನಿಸುತ್ತದೆ.ಪ್ಯಾರಾಸೆಟಮಲ್ ಒಂದು ವಿಶಿಷ್ಟ ಮೂಲ ಮದ್ದು. ಮೂರು ಕಾಸಿಗೆ ಒಂದು ಡೋಸ್ ಕೊಡಬಹುದು. ಇದರ ಮೂಲ ಸರಕನ್ನು ತುಸು ವ್ಯತ್ಯಾಸವಾಗಿಸಿ , ಜ್ವರದ ಮದ್ದು  ಸೇರಿಸಿ ಕೊನೆಯಲ್ಲಿ ಜಿನ್, ಸಿನ್  ರೀತಿಯ ಹೆಸರು ಬರುವಂತೆ ಮಾಡಿ ಕಂಪೆನಿಗಳ ಬ್ರಾಂಡ್ ನಲ್ಲಿ ಮಾರುತ್ತಾರೆ. ಬೆಲೆ ಮೂರು ಕಾಸಿನ ಬದಲು ಮೂರು‌ ಅಯ್ದು ರೂಪಾಯಿ ಎಲ್ಲ ಇರುತ್ತದೆ.

ಕಫ ತೊಡೆಯುವ ಮದ್ದಿಗೆ ಒಗ್ಗದಿಕೆ ಮದ್ದು ಸೇರಿಸಿ ಕೊನೆಯಲ್ಲಿ ಆಕ್ಸಿನ್ ಬಗೆಯ ಹೆಸರಿನ ಬ್ರಾಂಡ್ ಮದ್ದು ಮಾಡಿ  ಭಾರೀ ಬೆಲೆಗೆ ಮಾರುತ್ತಾರೆ. ಉದಾಹರಣೆಗೆ ಸಿಟ್ರಾಜಿನ್ ಒಂದು ಡೋಸು ಮೂಲ ಬೆಲೆ ನಾಲ್ಕಾಣೆ. ಅದಕ್ಕೆ ಅನಾಲ್ಜಿಸಿಕ್, ಆಂಟಿ ಇನ್ಫ್ಲೇಮೇಬಲ್, ಆಂಟಿ ಹಿಸ್ಟಾಮಿನ್ ಇತ್ಯಾದಿ ಸೇರಿಸಿ ಬ್ರಾಂಡ್ ಮಾಡಿ ಹತ್ತು ಪಟ್ಟು ಬೆಲೆ ಹೇಳುತ್ತಾರೆ. ಬ್ರಾಂಡ್ ಆದಾಗ ಎಲ್ಲ ಔಷಧಿಗಳ ಕತೆ ಇದು. ಪ್ಯಾರಾಸೆಟಮಲ್ ನಂಥವನ್ನು ವೈದ್ಯರಿಗೆ ಜೆನೆರಿಕ್ ಕೊಟ್ಟರೂ ಜನಸಾಮಾನ್ಯರಿಗೆ ಅದು ಹಾಗೆ ಸಿಗುತ್ತಿರಲಿಲ್ಲ. 2006ರಲ್ಲಿ ಮನಮೋಹನ್ ಸಿಂಗ್ ಸರಕಾರ, ಯುಪಿಎ ನಾಯಕಿ ಸೋನಿಯಾ ಗಾಂಧಿ ಜನರಿಗೆ ಅಗ್ಗದಲ್ಲಿ‌ ಜೆನೆರಿಕ್ ಮೆಡಿಸಿನ್ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಮಂಡಳಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ, ಆರೋಗ್ಯ ಇಲಾಖೆಗಳಿಗೆ ಕೇಳಿಕೊಂಡಿತು. ಅದರ ಫಲವಾಗಿ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಭಾರತೀಯ ಜನೌಷಧಿ ಕೇಂದ್ರಗಳಿಗೆ ಕಾಂಗ್ರೆಸ್ ಸರಕಾರವು 2008ರಲ್ಲಿ ಚಾಲನೆ ‌ನೀಡಿತು. ಮೊದಲ ಜನೌಷಧಿ ಕೇಂದ್ರವು ನವೆಂಬರ್ 25, 2008ರಲ್ಲಿ ಅಮೃತಸರ ಸಿವಿಲ್ ಆಸ್ಪತ್ರೆಯಲ್ಲಿ ಆರಂಭವಾಯಿತು. ಮೊದಲಿಗೆ ಸರಕಾರೀ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳು ತೆರೆದುಕೊಂಡವು.

2010ರ ಏಪ್ರಿಲ್ ನಲ್ಲಿ ಮನಮೋಹನ್ ಸಿಂಗ್ ಸರಕಾರವು ಇದಕ್ಕೆ ಹೊಸ ನಿಯಮ ಮಾಡಿತು. ಜನೌಷಧಿ ಕೇಂದ್ರಗಳು ರಾಜ್ಯ ಸರಕಾರದ ಸಹಿತ ಸ್ವತಂತ್ರ ಸೊಸೈಟಿ ಇಲ್ಲವೇ ಎನ್ ಜಿಓ ಸಂಸ್ಥೆಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಯಿತು. ಈ ನಿಯಮವನ್ನು ಮುಂದೆ ಮೋದಿ ಸರಕಾರ ದುರುಪಯೋಗ ‌ಮಾಡಿಕೊಂಡಿತು.

ಹೊಸ ನಿಯಮದಂತೆ 2010ರ‌ ಬಳಿಕ ಸರಕಾರೀ ಆಸ್ಪತ್ರೆಯ ಆಚೆ ಹಲವು ಎನ್ ಜಿ ಓ ಇಲ್ಲವೇ ಸೊಸೈಟಿಗಳು ಜನೌಷಧಿ ಮಾರಾಟಕ್ಕೆ ಅನುಮತಿ ಪಡೆದವು. ಕೇರಳದಲ್ಲಿ ಆಗ ವ್ಯಾಪಕವಾಗಿ ನೀತಿ ಮೆಡಿಕಲ್ ಸೊಸೈಟಿ ಜನೌಷಧಿ ಮಾರಾಟ ಮಳಿಗೆಗಳನ್ನು ತೆರೆಯಿತು.ಮೋದಿ ಸರಕಾರವು 2015ರಲ್ಲಿ ಇದರ ಹೆಸರನ್ನು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಎಂದು ಹೆಸರು ಬದಲಾವಣೆ ಮಾಡಿತು. ಅಷ್ಟೇ ಅಲ್ಲ ಅದರ ಬೋರ್ಡ್ ಮೇಲೆ ನರೇಂದ್ರ ಮೋದಿಯವರ ಫೋಟೋ ಹಾಕಿ ಪುಕ್ಕಟೆ ಪ್ರಚಾರ ರಾಜಕೀಯ ನಡೆಸಿತು. ಮೋದಿಯವರ ಕಾಲದಲ್ಲಿ ಹತ್ತಾರು ಮನಮೋಹನ್ ಸಿಂಗ್  ಸರಕಾರದ ಕಾಲದ‌ ಯೋಜನೆಗಳ ಹೆಸರು ಬದಲಾವಣೆ, ಪ್ರಧಾನ ಮಂತ್ರಿ ಎಂದು ಸೇರಿಸುವಿಕೆ ನಡೆಯಿತು. ಅಷ್ಟೇ ಅಲ್ಲ ಇದೆಲ್ಲ ಇದೇ ಪ್ರಧಾನ ಮಂತ್ರಿಯ ಕೊಡುಗೆ ಎಂದು ಹಳೆಯದನ್ನು ಮುಚ್ಚಿ ಹಾಕುವ ಕೆಲಸವೂ ನಡೆಯುತ್ತಲೇ ಇದೆ.

ಇದರ ಹೆಸರು ಪಿಎಂಜೆಎವೈ, ಪಿಎಂಜೆಎಕೆ ಎಂದಾದುದಲ್ಲದೆ 2016ರಲ್ಲಿ ಪಿಎಂಬಿಜೆಪಿ- ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಎಂಬ  ಕಸರತ್ತಿನ ಹೆಸರನ್ನು ಸಹ ಪಡೆಯಿತು.

ಭಾರತ ಸರಕಾರದ ಫಾರ್ಮಾಸ್ಯೂಟಿಕಲ್ ಇಲಾಖೆ, ಸಚಿವಾಲಯಗಳಲ್ಲಿ ಆರೋಗ್ಯ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಅಲ್ಲದೆ ರಾಜ್ಯದ ಸೊಸೈಟಿ ಇಷ್ಟೆಲ್ಲ ಇದ್ದರೂ ಪ್ರಧಾನಿ ಮೋದಿಯವರ ಫೋಟೋ ಜನೌಷಧಿ  ಕೇಂದ್ರಗಳಲ್ಲಿ ಏಕೆ  ಎಂದು ಕೇಳುವಂತಿಲ್ಲ! 

-By ಪೇಜಾ