ಸೋಮವಾರ ದೆಹಲಿಯಲ್ಲಿ ಉಷ್ಣಮಾಪಕದ ಪಾದರಸ ಮೇಲೇರುವುದು ನಿಲ್ಲಲಿಲ್ಲ; ಮಂಗಳೂರಿನಲ್ಲಿ ಬಿಸಿ ಗಾಳಿಯ ಬೆನ್ನಿಗೆ ಸಿಡಿಲಬ್ಬರದ ಮಳೆ ಸುರಿದು ಕಾಲವನ್ನು ಅಣಕಿಸಿತು.
ಭೂಬಿಸಿಯ ದುಷ್ಪರಿಣಾಮ ಬಲೆ ಬೀಸಿದೆ. ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಶತಮಾನದ ದಾಖಲೆಯ ಮಳೆ ಬಂದು ಪ್ರವಾಹದಲ್ಲಿ ಭಾರೀ ಹಾನಿ ಉಂಟಾಯಿತು. ಅದರಲ್ಲೂ ಮೂಡಣ, ಕೊಂಗಣ ಆಸ್ಟ್ರೇಲಿಯಾದಲ್ಲಿ ಅಪಾರ ಹಾನಿ ಕಂಡುಬಂತು.
ಮೂರು ವಾರದ ಹಿಂದೆ ಉತ್ತರಾಖಂಡದಲ್ಲಿ ಹಿಮನದಿ ಕರಗಿ ಹಿಮಪಾತ ಆಗಿ, ಉಂಟಾದ ಪ್ರವಾಹದಲ್ಲಿ ಹೊಸ ವಿದ್ಯುದಾಗಾರ ಕೊಚ್ಚಿ ಹೋದುದರ ಸಹಿತ ಸಾಕಷ್ಟು ವಿತ್ತ ಮತ್ತು ಜೀವ ಹಾನಿ ಆಯಿತು. ಇನ್ನೂರರಷ್ಟು ಜನ ಇನ್ನೂ ನಾಪತ್ತೆ ಪಟ್ಟಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ.
ಮೂರು ದಿನಗಳಿಂದ ಕರ್ನಾಟಕದ ಕೆಲವು ಕಡೆ ರಾತ್ರಿ ಹೊತ್ತು ಗುಡುಗು ಸಹಿತದ ಮಳೆ ಆಗಿದೆ. ಮಂಗಳೂರಿನಲ್ಲಿ ಶನಿವಾರ ರಾತ್ರಿ 11 ಗಂಟೆಗೆ ಹಾಗೂ ಸೋಮವಾರ ಇರುಳು 9 ಗಂಟೆಗೆ ಭಯಂಕರ ಮಳೆ ಬಂದಿದೆ. ನೀರನ್ನು ಮೀರಿ ಮಿಂಚು ಸಿಡಿಲಿನ ಪ್ರವಾಹ ಕೆಲವರನ್ನು ಕಂಗೆಡಿಸಿದೆ. ಇದೇ ಅವಧಿಯಲ್ಲಿ ಮಲೆನಾಡಿನ ಕೆಲವೆಡೆ ಮಳೆಯು ಬೆಳೆ ಹಾನಿಗೆ ಕಾರಣವಾಗಿದೆ. ಸಿಡಿಲು ಬಡಿದು ಒಂದು ಜೀವ ಹೋಗಿದೆ.
ಸಿಡಿಲು ಬಡಿದು ಎಂದು ಹೇಳಿದರೂ ಸಾಯುವುದು ಮಿಂಚು ಕಚ್ಚಿ. ಸಿಡಿಲು ಆ ಮಿಂಚಿನ ಕಾರಣದ ಸದ್ದು ಮಾತ್ರ. ಸದ್ದು ನಿಮ್ಮನ್ನು ಕಂಗೆಡಿಸಬಹುದು ಹೊರತು ಕೊಲ್ಲಲಾರದು.
ಸೋಮವಾರ ದೆಹಲಿಯಲ್ಲಿ ಒಂದೇ ಸಮನೆ ಬಿಸಿ ಮಟ್ಟ ಏರಿ, ಬಿಸಿ ಗಾಳಿ ಹಲವರನ್ನು ಗಾಸಿಗೊಳಿಸಿತು. ನೇಸರಾಘಾತ ವರದಿಯಾಯಿತು. ಎಂಟು ಗಂಟೆ ಹೊತ್ತಿಗೆ ಬಿಸಿ ಮಟ್ಟ 41.5 ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದ್ದರಿಂದ ಜನ ದಂಗಾದರು. ಕರ್ನಾಟಕದಲ್ಲಿ ಆ ಸಮಯದಲ್ಲಿ ಗುಡುಗು ಮಳೆ ಸುರಿಯಿತು. ಒಂದಿಷ್ಟು ತಂಪು ಆರಾಮ ತಂದರೂ ಹಾನಿ ಮರೆಯುವಂತಿಲ್ಲ.
ಕ್ಯುಮುಲಸ್ ಮೋಡಗಳು ನೀರಾವಿಯಿಂದ ಆಗಿದ್ದು, 2,000 ಅಡಿಗಿಂತ ಕೆಳಮಟ್ಟದಲ್ಲಿ ಇರುತ್ತವೆ. ಸಪಾಟು ತಳದ ಇದು ಅನುಕೂಲಕರ ಹವೆಯಲ್ಲಿ ಕ್ಯುಮುಲೋನಿಂಬಸ್ ಮಾದರಿಯ ಸ್ಥಿತಿ ತಲುಪಿದಾಗ ಗುಡುಗುಟ್ಟುವ ಮಳೆ ಸುರಿಸುತ್ತದೆ. ಮಂಗಳೂರಿನಲ್ಲಿ ನಿನ್ನೆ ಹಗಲಿನಲ್ಲಿ ಹತ್ತಿಯಂತೆ ಕಾಣಿಸಿಕೊಂಡ ಅಂಥ ಕ್ಯುಮುಲಸ್ ಮೋಡ ಸಂಜೆಯಾಗುವಾಗ ಬಣ್ಣ ಬದಲಿಸಿದ್ದು ಮಳೆ ಮೋಡ ಆದುದರ ಸೂಚನೆ ನೀಡಿತ್ತು. ಮೋಡಗಳು ಘಟ್ಟಿಸಿದರೆ ಮಾತ್ರ ಮಳೆ ಎಂದೇನೂ ಇಲ್ಲ. ಮೋಡದ ಆವಿ ರೂಪದ ನೀರಿಗೆ ಹನಿಯಾಗುವ ಅವಕಾಶ ಸಿಕ್ಕರೆ ಮಳೆ ಬೀಳುತ್ತದೆ. ಬೆಳ್ಳಿಯ ಅಯೊಡೈಡ್ ಸಿಂಪಡಿಸಿ ಕೃತಕ ಮಳೆ ಬರಿಸುವುದು ಈ ವಿಧಾನದಲ್ಲಿ. ನಿನ್ನೆಯ ಮಳೆಯಲ್ಲಿ ಮೋಡಗಳು ಮಿತಿ ಮೀರಿ ಘಟ್ಟಿಸಿದ್ದರಿಂದ ಅಷ್ಟು ಮಿಂಚು ಗುಡುಗು ಅನುಭವ ಆಯಿತು. ಬೆಳಕಿನ ವೇಗ ಶಬ್ದಕ್ಕಿಂತ ಅಧಿಕ. ಹಾಗಾಗಿ ಒಂದೇ ಸಂಗತಿ ಮೊದಲು ಮಿಂಚಾಗಿ, ಅದರ ಬಳಿಕ ಗುಡುಗಾಗಿ ನಮ್ಮ ಅನುಭವಕ್ಕೆ ಬರುತ್ತದೆ.
ಭೂಬಿಸಿಯು ಮಾಡುವ ಅತಿ ಮುಖ್ಯ ಹಾನಿ ಭೂಮಿಯ ಮಂಜು ಹಾಸುಗಳನ್ನು ಕರಗಿಸುವುದು. ನಮ್ಮ ಮರುಭೂಮಿ ಪ್ರದೇಶಗಳಲ್ಲಿ ಅತಿ ಬಿಸಿಯ ಹಗಲಿನ ಬಳಿಕ ಅತಿ ಚಳಿಯ ಇರುಳು ನೋಡುತ್ತೇವೆ. ಹಾಗೆಯೇ ಭೂಬಿಸಿಗೆ ವಿರುದ್ಧವಾಗಿ ಅತಿ ಚಳಿಗಾಲವನ್ನೂ ತರಬಲ್ಲದು. ಕಳೆದ ಐದಾರು ವರುಷಗಳಿಂದ ಉತ್ತರ ಅಮೆರಿಕ ಮತ್ತು ಯೂರೋಪುಗಳಲ್ಲಿ ಅತಿ ತೀಕ್ಷ್ಣವಾದ ಚಳಿಗಾಲ, ಮಂಜು ಸುರಿಯುವುದು ಕಂಡು ಬಂತು.
ಇದು ಭೂಮಿ ವಲಯದ ಪರಿಹಾರ ಸೂತ್ರ ಇರಬಹುದು. ಆದರೆ ಮಾನವ ಕುಲಕ್ಕೆ ಪರಿಹಾರ ಸೂತ್ರವಲ್ಲ. ಮಾನವನು ಭೂಬಿಸಿ, ಅತಿಮಳೆ, ಬಿಸಿಗಾಳಿ, ಚಳಿಗಾಳಿ, ಅತಿ ಮಂಜು, ಪ್ರವಾಹ, ಹಿಮನದಿ ಕರಗುವಿಕೆ ಇವೆಲ್ಲವುಗಳಿಂದಲೂ ಹಾನಿಯನ್ನು ಅನುಭವಿಸುವುದು ತಪ್ಪದು.
ಮಾರಿಶಿಯಸ್ ದ್ವೀಪಗಳಲ್ಲಿ ಮಳೆ ಕಡಿಮೆ. ಆದರೆ ವರುಷದ ಹನ್ನೆರಡು ತಿಂಗಳುಗಳಲ್ಲಿಯೂ ಕೆಲವು ದಿನ ಮಳೆ ಬಂದೇ ಬರುತ್ತದೆ. ಆದರೆ ನಮಗೆ ಮಳೆಗಾಲದ್ದಲ್ಲದ ಮಳೆಯು ಬೆಳೆ ಹಾನಿ ಮೊದಲಾದ ಊಹಾತೀತ ತೊಂದರೆ ತರುತ್ತದೆ. ಭೂ ಪರಿಸರ ಕೆಡಿಸುತ್ತಿರುವ ನಾವು ಅದರ ದುಷ್ಪರಿಣಾಮಗಳನ್ನು ಎದುರಿಸದೆ ಬೇರೆ ದಾರಿಯಿಲ್ಲ.
-By ಪೇಜಾ