ಕಾರ್ಕಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕಾರ್ಕಳದ ನಕ್ರೆಯಲ್ಲಿರುವ ಹಿರಿಯ ಸಾಹಿತಿ ಜೋರ್ಜ್ ಕ್ಯಾಸ್ತೆಲಿನೊ ಇವರ ಮನೆಯ ಅಂಗಳದ ಕಲಾಂಜಲಿ ವೇದಿಕೆಯಲ್ಲಿ ಆಗಸ್ಟ್ 03 ರಂದು ʼಸಾಹಿತ್ಯ ಸಂಭ್ರಮ- 2ʼ ಮತ್ತು ʼಕಾವ್ಯಾಂ- ವ್ಹಾಳೊ- 5ʼ ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಅಕಾಡೆಮಿಯ ಮಾಜಿ ಅಧ್ಯಕ್ಷ ದಿ| ಡಾ| ಜಗದೀಶ್ ಪೈಯವರಿಗೆ ಶೃದ್ದಾಂಜಲಿಯನ್ನು ಸಲ್ಲಿಸಲಾಯಿತು. ಅಕಾಡೆಮಿಯ ಮಾಜಿ ಸದಸ್ಯರಾದ ಅರುಣ್ ಜಿ. ಶೇಟ್, ಡಾ| ಜಗದೀಶ್ ಪೈಯವರಿಗೆ ಸಂತಾಪ ಸೂಚಕ ಮಾತುಗಳನ್ನಾಡಿದರು. ಮೃತರ ಭಾವಚಿತ್ರಕ್ಕೆ ಅವರ ಪತ್ನಿ ಹಾಗೂ ಮಗ, ಅಕಾಡೆಮಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಗಣ್ಯರು ಪುಷ್ಪಾಂಜಲಿ ಸಲ್ಲಿಸಿದರು.  ದಿವಂಗತರ ಧರ್ಮಪತ್ನಿ ಡಾ| ನಂದಾ ಜೆ. ಪೈಯವರು ಡಾ| ಜಗದೀಶ್ ಪೈಯವರ ಜೀವನದ ಬಗ್ಗೆ ಹೃದಾಯಾಂತರಾಳದ ಮಾತುಗಳನ್ನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಪ್ರಾಸ್ತಾವಿಕ ಮಾತಾನಾಡಿ, ಡಾ| ಜಗದೀಶ್ ಪೈಯವರ ಸಾಧನೆಗಳನ್ನು ನೆನಪಿಸಿಕೊಂಡರು.

ʼಸಾಹಿತ್ಯ ಸಂಭ್ರಮ -2ʼ ಮತ್ತು ʼಕಾವ್ಯಾಂ ವ್ಹಾಳೊ- 5ʼ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ʼಅವರು ಸಾಹಿತ್ಯದ ಸಂಭ್ರಮವು ನಮ್ಮ ಬದುಕಿನ ಸಂಭ್ರಮವಾಗಬೇಕು. ಎಲ್ಲೆಲ್ಲಿಯೂ ಕೊಂಕಣಿಯ ಸದ್ದು ಸಡಗರ ಕೇಳಬೇಕು. ಮಾತ್ರವಲ್ಲದೇ ಸಾಧನೆಗೈದ ಹಿರಿಯ ಕೊಂಕಣಿ ಸಾಹಿತಿಗಳನ್ನು ಅವರ ವಸತಿಗೃಹದಲ್ಲಿ ಭೇಟಿಯಾಗಿ ಗೌರವ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು.'.   

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಂ| ಸ್ವಾಮಿ| ಪ್ರಾನ್ಸಿಸ್ ಲುವಿಸ್ ಡೆಸಾರವರು ಮಾತಾನಾಡಿ, ʼಕೊಂಕಣಿ ನಮ್ಮ ಜೀವಂತರ್ಗತ ಭಾಗವಾಗಬೇಕು. ಅದು ಬರೇ ಬಳಸುವ ವಸ್ತುವಾಗಬಾರದು. ಸಾಹಿತ್ಯವನ್ನು ರಚಿಸುವವರಿದ್ದರೂ, ಓದುಗರ ಸಂಖ್ಯೆ ಬಹಳ ವಿರಳ. ನಮ್ಮ ಮಾತೃಭಾಷೆಯಲ್ಲಿ ಸಾಹಿತ್ಯವನ್ನು ನಾವು ಓದಿ, ಅದನ್ನು ಅರ್ಥೈಸಿಕೊಳ್ಳಲು ಕಾರ್ಯರೂಪಗೊಳಿಸಲು ನಾವೆಲ್ಲರೂ ಕಟಿಬದ್ದರಾಗಿರಬೇಕೆಂದುʼ ಕರೆ ಕೊಟ್ಟರು.  

ಈ ಸಂದರ್ಭದಲ್ಲಿ ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ಬರೆದಿರುವ ಖ್ಯಾತ ಸಾಹಿತಿ ಮತ್ತು ಛಂದೋಶಾಸ್ತ್ರ ತಜ್ಞರು ನಾರಾಯಣ ಎಸ್. ಗವಾಳ್ಕರ್ರವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಖ್ಯಾತ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕರಾದ  ಜೋರ್ಜ್ ಕ್ಯಾಸ್ತೆಲಿನೊ ಅವರೊಂದಿಗೆ ಯುವ ಸಾಹಿತಿಯಾದ ಎಲ್ಸನ್ ಡಿಸೋಜ ಹಿರ್ಗಾನ್ರವರು ಸಂವಾದ ನಡೆಸಿದರು. ಜೋರ್ಜ್ ಕ್ಯಾಸ್ತೆಲಿನೊರವರು ತಮ್ಮ ಬದುಕಿನ ಆಯಾಮಾಗಳನ್ನು ಆಸಕ್ತಿದಾಯಾಕವಾಗಿ ಸಭೆಯ ಮುಂದಿಟ್ಟರು.

ʼಕಾವ್ಯಾಂ - ವ್ಹಾಳೊ -5ʼ ಕಾರ್ಯಕ್ರಮದಲ್ಲಿ ಖ್ಯಾತ ಕೊಂಕಣಿ ಕವಿಗಳಿಂದ ಕವಿಗೋಷ್ಟಿ ನಡೆಸಲ್ಪಟ್ಟಿತು.  ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಲವೀಟಾ ಡಿಸೋಜ, ನಕ್ರೆಯವರು ವಹಿಸಿದ್ದರು. ರಾಮಚಂದ್ರ ಪೈ, ಪ್ರಮೀಳಾ ಫ್ಲಾವಿಯಾ, ಕಾರ್ಕಳ, ರಾಘವೇಂದ್ರ ಪ್ರಭು, ಕರ್ವಾಲು,  ಓಜ್ವಾಲ್ಡ್ ಮರಿಯನ್ ಡಿಸೋಜ, ಡಾ| ಸುಮತಿ ಪಿ., ಪ್ರಕಾಶ್ ಮಾರ್ಟಿಸ್, ಕಾಂತಾವರ ಶಿವಾನಂದ ಶೆಣೈ, ರೋಬರ್ಟ್ ಮಿನೇಜಸ್ ಕಣಜಾರ್, ಸೀಮಾ ಕಾಮತ್, ಪ್ರಕಾಶ್ ಡಿಸೋಜ ಅಜೆಕಾರ್ ಇವರು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು.

ಸದಸ್ಯ ಸಂಚಾಲಕರಾದ ದಯಾನಂದ ಮಡ್ಕೇಕರ್ ಹಾಗೂ ಅಕಾಡೆಮಿ ಸದಸ್ಯರಾದ ನವೀನ್ ಲೋಬೊ ಉಪಸ್ಥಿತರಿದ್ದರು. ಜೆರಾಲ್ಡ್ ಪ್ರಕಾಶ್ ಮಾರ್ಟಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.